×
Ad

ಪಂಜಾಬ್ ಸಿಎಂ ವಿಮಾನದಲ್ಲಿ ಮದ್ಯದ ನಶೆಯಲ್ಲಿದ್ದರೆಂಬ ಆರೋಪದ ಬಗ್ಗೆ ಕೇಂದ್ರ ಸಚಿವ ಸಿಂಧಿಯಾ ಪ್ರತಿಕ್ರಿಯಿಸಿದ್ದು ಹೀಗೆ

Update: 2022-09-20 19:02 IST
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (PTI)

ಹೊಸದಿಲ್ಲಿ: 'ಮದ್ಯದ ನಶೆಯಲ್ಲಿದ್ದರು' ಎಂಬ ಕಾರಣಕ್ಕೆ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ದಿಲ್ಲಿಗೆ ಹೊರಟಿದ್ದ ಲುಫ್ತಾನ್ಸಾ ಏರ್‍ಲೈನ್ಸ್ ವಿಮಾನದಿಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್(Bhagwant Mann) ಅವರನ್ನು ಕೆಳಗಿಳಿಸಲಾಗಿತ್ತು ಎಂಬ ಆರೋಪಗಳ ಕುರಿತು ಪರಿಶೀಲಿಸುವುದಾಗಿ ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಹೇಳಿದ್ದಾರೆ. ಈ ಕುರಿತಂತೆ ವಾಸ್ತವಾಂಶಗಳನ್ನು ದೃಢಪಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಮಾನ್ ಅವರು ಮದ್ಯದ ಅಮಲಿನಲ್ಲಿದ್ದುದರಿಂದ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಶಿರೋಮಣಿ ಅಕಾಲಿ ದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಸೋಮವಾರ ಆರೋಪಿಸಿದ್ದರು. ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಕೂಡ ಈ ಕುರಿತು ತನಿಖೆಗೆ ಆಗ್ರಹಿಸಿ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದರು.

"ಇದು ವಿದೇಶಿ ನೆಲದಲ್ಲಿ ನಡೆದ ಘಟನೆ. ನಾವು ವಾಸ್ತವಾಂಶಗಳನ್ನು ದೃಢಪಡಿಸಬೇಕಿದೆ. ಡೇಟಾ ಒದಗಿಸುವುದು ಲುಫ್ತಾನ್ಸಾ ಏರ್‍ಲೈನ್ಸ್‍ಗೆ ಬಿಟ್ಟ ವಿಚಾರ. ನನಗೆ ಬಂದ ಮನವಿಯ ಹಿನ್ನೆಲೆಯಲ್ಲಿ ನಾನು ಈ ಕುರಿತು ಖಂಡಿತಾ ಪರಿಶೀಲಿಸುತ್ತೇನೆ,'' ಎಂದು ಸಿಂಧಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.

ತನ್ನ ಪಕ್ಷದ ಪಂಜಾಬ್ ಮುಖ್ಯಮಂತ್ರಿಯ ವಿರುದ್ಧದ ಆರೋಪವನ್ನು ಆಪ್ ನಿರಾಧಾರ ಮತ್ತು ಬೋಗಸ್ ಎಂದು ಬಣ್ಣಿಸಿದೆ.

ಹೂಡಿಕೆಗಳನ್ನು ಆಕರ್ಷಿಸಲು ಎಂಟು ದಿನಗಳ ಜರ್ಮನಿ ಪ್ರವಾಸದಲ್ಲಿದ್ದ ಮಾನ್ ಅವರು ಸೋಮವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ.

ಇದನ್ನೂ ಓದಿ: ಐಎಎಸ್ ಅಧಿಕಾರಿಯಾಗಿ ಮರುನೇಮಕಾತಿ ಬಳಿಕ ಆರ್ಟಿಕಲ್ 370 ವಿರುದ್ಧದ ಅರ್ಜಿ ಹಿಂಪಡೆದ ಶಾ ಫೈಸಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News