ಭಟ್ಕಳದಲ್ಲಿ ನಿಚ್ಚಲಮಕ್ಕಿ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿಲ್ಲ: ತಂಝೀಮ್ ಸ್ಪಷ್ಟೀಕರಣ

Update: 2022-09-20 15:31 GMT

ಭಟ್ಕಳ, ಸೆ. 20: ಭಟ್ಕಳದ ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ಮಂಟಪ ನಿರ್ಮಾಣ ಹಾಗೂ ಟಿಪ್ಪು ಸುಲ್ತಾನ್ ಮಹಾದ್ವಾರ ನಿರ್ಮಾಣ ಸಂಬಂಧಿಸಿದಂತೆ ಉಂಟಾದ ವಿವಾದದಲ್ಲಿ ಶಾಸಕ ಸುನಿಲ್ ನಾಯ್ಕ ಉದ್ದೇಶ ಪೂರ್ವಕವಾಗಿ ತಂಝೀಮ್ ಸಂಸ್ಥೆ ಹಾಗೂ ಇಸ್ಲಾಂ ಧರ್ಮವನ್ನು ಎಳೆದು ತರುತ್ತಿದ್ದು ಇಂತಹ ಕ್ಷುಲ್ಲಕ ರಾಜಕಾರಣ ಶಾಸಕರಿಗೆ ಶೋಭೆ ತರುವಂತಹದ್ದಲ್ಲ ಎಂದು ಆರೋಪಿಸಿರುವ ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಫರ್ವಾಝ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದು, ದ್ವಾರಮಂಟಪ ನಿರ್ಮಾಣಕ್ಕೆ ತಂಝೀಮ್ ಸಂಸ್ಥೆ ಅಡ್ಡಿಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನ ದ್ವಾರ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಂಝೀಮ್ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ ಮತ್ತು ಪುರಸಭೆಗೆ ದೂರನ್ನೂ ನೀಡಿಲ್ಲ. ಶಾಸಕ ಸುನಿಲ್ ನಾಯ್ಕ ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ತಂಝೀಮ್ ಸಂಸ್ಥೆಯನ್ನು ಎಳೆದು ತರುತ್ತಿರುವುದನ್ನು ಪ್ರಜ್ಞಾವಂತರು ಗಮನಿಸುತ್ತಿದ್ದಾರೆ. ಅಲ್ಲದೆ ಮಾತು ಮಾತಿಗೆ ಇದು ಪಾಕಿಸ್ಥಾನವಲ್ಲ ಎಂಬ ಹೇಳಿಕೆ ನೀಡುತ್ತಿದ್ದು ಇದರಿಂದ ನಮಗೆ ತುಂಬಾ ನೋವಾಗಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಇಂತಹ ಹೊಣೆಗೇಡಿತನದ ಹೇಳಿಕೆ ನೀಡುವುದು ಭೂಷಣವಲ್ಲ. ನಾವು ಸಹ ಈ ದೇಶದ ಪ್ರಜೆಗಳು ನಿಮಗೆಷ್ಟು ಹಕ್ಕು ಇಲ್ಲಿದೆಯೋ ಅಷ್ಟೇ ಹಕ್ಕೂ ನಮಗೂ ಇದೆ ಎನ್ನುವುದನ್ನು ಶಾಸಕರಾದ ನಿಮಗೆ ತಿಳಿಸಿ ಹೇಳಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂರು ವರ್ಷಗಳ ಇತಿಹಾಸ ಇರುವ ತಂಝೀಮ್ ಸಂಸ್ಥೆ ಯಾವತ್ತೂ ಕೂಡ ನಿಮ್ಮ ರೀತಿಯಲ್ಲಿ ಕ್ಷುಲ್ಲಕವಾಗಿ ಯೋಚಿಸಿಲ್ಲ. ಇಲ್ಲಿ ಯಾವಾಗಲೂ ಸೌಹಾರ್ದತೆ, ಶಾಂತಿಯಿಂದ ಪರಸ್ಪರ ಕೂಡಿ ಬಾಳುವಂತೆ ಮಾಡಿದ ಇತಿಹಾಸ ತಂಝೀಮ್ ಸಂಸ್ಥೆಗೆ ಇದೆ. ವಿನಾಕಾರಣ ನಿಮ್ಮ ಹಾಗೆ ಇತರರ ಧಾರ್ಮಿಕ, ನಂಬಿಕೆಯ ವಿಷಯದಲ್ಲಿ ಮೂಗು ತೂರಿಸುವುದು ತಂಝೀಮ್ ಮತ್ತು ಮುಸ್ಲಿಮ ಸಮುದಾಯದ ಜಾಯಮಾನವಲ್ಲ. ನೀವು ಬೇಕಾದರೆ ನಿಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಿಕೊಳ್ಳಿ. ಇಲ್ಲಿನ ಹಿಂದೂ-ಮುಸ್ಲಿಮರ ನಡುವೆ ಹುಳಿ ಹಿಂಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದು ತಿಳಿದುಕೊಂಡರೆ ಅದು ನಿಮ್ಮ ಮೂರ್ಖತನದೀತು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ನೀವು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯ ಕೋಮು ಪ್ರಚೋದಕ ಮಾತುಗಳನ್ನು ಆಡುತ್ತಲೆ ಬಂದಿದ್ದೀರಿ. ಕ್ಷೇತ್ರದ ಅಭಿವೃದ್ಧಿಯ ಕೆಲಸ ಒಂದೆಡೆ ಇರಲಿ. ನಿಮಗೆ ಓಟು ಕೊಟ್ಟು ನಿಮ್ಮನ್ನು ಶಾಸಕರನ್ನಾಗಿ ಮಾಡಿದ ಜನರನ್ನೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಎಲ್ಲೆಂದರಲ್ಲಿ ಮೂಗು ತೂರಿಸುತ್ತ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಈಗ ಚುನಾವಣೆಗೆ ಕೇವಲ ಕೆಲವು ತಿಂಗಳು ಬಾಕಿ ಇರಬೇಕಾದರೆ ಮಹಾದ್ವಾರದ ನಿರ್ಮಾಣದ ನಾಟಕವಾಡುತ್ತಿದ್ದೀರಿ. ಮಹಾದ್ವಾರ ನಿರ್ಮಾಣಕ್ಕೆ ತಂಝೀಮ್ ಆಗಲಿ ಮುಸ್ಲಿಮ್ ಸಮುದಾಯವಾಗಲಿ ಯಾವತ್ತೂ ಆಕ್ಷೇಪ ವ್ಯಕ್ತಪಡಿಸಿಲ್ಲ ಮುಂದೆಯೂ ಆಕ್ಷೇಪಿಸುವುದಿಲ್ಲ. ಪುರಸಭೆಯಲ್ಲಿ ಕಾನೂನು ಪ್ರಕಾರ ಅಧಿಕೃತವಾಗಿ ಅನುಮತಿ ಪಡೆದು ನೀವು ಎಲ್ಲಿ ಬೇಕಾದರೂ ಏನು ಬೇಕಾದರೂ ಕಟ್ಟಿಕೊಳ್ಳಿ. ಆದರೆ ನಿಮಗೆ ಗೊತ್ತು ಅಧಿಕೃತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದು. ಇದಕ್ಕಾಗಿಯೇ ಚುನಾವಣೆಯ ಗಿಮಿಕ್ ಹೇಳಿಕೆಗಳನ್ನು ನೀಡುತ್ತಿದ್ದೀರಿ. ತಂಝೀಮ್ ವಿರುದ್ಧ ಮಾತನಾಡಿದರೆ ಜನ ನಿಮಗೆ ಓಟು ಕೊಡುತ್ತಾರೆ ಎಂದು ನೀವು ಭಾವಿಸಿರಬಹುದು. ಹೀಗೆ ಅಮಾಯಕ ಹಿಂದೂ ಸಹೋದರರನ್ನು ನೀವು ಯಾಮಾರಿಸುವುದನ್ನು ಬಿಟ್ಟುಬಿಡಿ. ಚುನಾವಣೆಗೆ ಕೆಲ ತಿಂಗಳು ಉಳಿದಿವೆ ಮುಂದೆ ನೀವು ಆಯ್ಕೆಯಾಗುತ್ತೀರೋ ಆಥವಾ ನಿಮಗೆ ಟಿಕೇಟು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಉಳಿದ ದಿನಗಳಷ್ಟಾದರೂ ಸ್ವಲ್ಪ ಜನಹಿತ ಕಾರ್ಯಗಳನ್ನು ಮಾಡಿ ಭಟ್ಕಳ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಿ. ಅದನ್ನು ಬಿಟ್ಟು ತಂಝೀಮ್ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸಂಬಂಧ ಪಡದ ವಿಷಯಗಳಲ್ಲಿ   ವಿವಾದಗಳನ್ನು ತಮ್ಮ ಮೈಮೇಲೆ ಹಾಕಿಕೊಳ್ಳಬೇಡಿ.

ನಾವು ಎಷ್ಟರ ಮಟ್ಟಿಗೆ ಸೌಹಾರ್ದತೆ ಮತ್ತು ಸಂಹಿಷ್ಟುತೆಯಿಂದ ಬಾಳಿ ಬದುಕುತ್ತಿದ್ದೇವೆ ಎಂಬುದನ್ನು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ, ಯಾವುದೇ ಸಂದರ್ಭದಲ್ಲಿ ಹಿಂದೂಗಳ ಧಾರ್ಮಿಕ ವಿಷಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅವರನ್ನು ಗೌರವಿಸುತ್ತಾ ಬಂದಿರುವ ನೂರಾರು ವರ್ಷಗಳ ಇತಿಹಾಸ ನಮ್ಮದು. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಹ ಕೊಡಬಹುದು. ನೀವು ಎಷ್ಟೇ ನಮ್ಮನ್ನು ವಿಚಲಿತರನ್ನಾಗಿ ಮಾಡುವ ಪ್ರಯತ್ನ ಮಾಡಿ. ಆದರೆ ನಾವು ಮಾತ್ರ ನಮ್ಮ ಸೌಹಾರ್ದತೆಯ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ.

ಚನ್ನಪಟ್ಟಣ ಹನುಮಂತ ದೇವಸ್ಥಾನವಾಗಲಿ, ಮಾರಿಕಟ್ಟೆ ದೇವಸ್ಥಾನವಾಗಲಿ ಇಲ್ಲಿನ ಹಿಂದೂ-ಮುಸ್ಲಿಮ್ ಪರಸ್ಪರ ಸಹಕಾರದಿಂದಲೇ ನಡೆಯುತ್ತ ಬಂದಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಅಲ್ಲದೆ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ದೇವಸ್ಥಾನದ ಮುಂದಿನ ರಸ್ತೆಯ ತಿರುವು ನಿರ್ಮಾಣ ಮಾಡಿದಾಗಲೂ ನಾವು ಯಾವುದೇ ಆಕ್ಷೇಪಗಳನ್ನು ಎತ್ತಿಲ್ಲ. ಅಲ್ಲಿ ನಿಜಕ್ಕೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೂ ಕೂಡ ನಾವು ಸಹಿಸಿಕೊಂಡು ಬಂದಿದ್ದೇವೆ. ಇದು ಇಲ್ಲಿನ ಸಮುದಾಯ ನಮ್ಮ ಮೇಲೆ ಹೊಂದಿರುವ ಪ್ರೀತಿ, ವಿಶ್ವಾಸದ ಫಲವಾಗಿದೆ. ಈಗ ನೀವು ರಾಜಕೀಯ ದುರ್ಲಾಭದ ಉದ್ದೇಶದಿಂದ ಜವಾಬ್ದಾರಿತ ಸ್ಥಾನದಲ್ಲಿದ್ದೂ ಹೀಗೆಲ್ಲ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಜನರು ಹಾಗೂ ಭಗವಂತ ನಿಮಗೆ ಕ್ಷಮಿಸಲ್ಲ.

ಹಿಂದೂ ಇರಲಿ, ಮುಸ್ಲಿಮನಿರಲಿ, ಶಾಸಕನಿರಲಿ, ಮಂತ್ರಿಯೇ ಆಗಿರಲಿ ಎಲ್ಲರಿಗೂ ಒಂದು ಕಾನೂನು ಇದೆ. ಅದರಂತೆ ನಡೆದುಕೊಳ್ಳುವುದು ಎಲ್ಲರ ಧರ್ಮವಾಗಿದೆ. ನೀವು ಕಾನೂನು ರೀತಿಯಲ್ಲಿ ಅನುಮತಿ ಪಡೆದುಕೊಂಡು ದ್ವಾರವನ್ನು ನಿರ್ಮಾಣ ಮಾಡಿಕೊಳ್ಳಿ ಯಾರೂ ಕೂಡ ಅದನ್ನು ತಡೆಯಲು ಧೈರ್ಯ ಮಾಡುವುದಿಲ್ಲ. ಅಂದ ಹಾಗೆ ತಂಝೀಮ್ ಪುರಸಭೆಯ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಅದೂ ಅಲ್ಲದೆ ನಿಮ್ಮ ದೇವಸ್ಥಾನದ ಪ್ರದೇಶದಲ್ಲಿ ನೀವು ದ್ವಾರ ನಿರ್ಮಾಣ ಮಾಡಿಕೊಂಡರೆ ನಮಗೆ ಯಾವುದೇ ಅಭ್ಯಂತರವಿಲ್ಲ. ಹಾಗೂ ಬೇರೊಬ್ಬರು ಕೂಡ ಸುಲ್ತಾನ್ ಸ್ಟ್ರೀಟ್ ನಲ್ಲಿ ಟಿಪ್ಪು ದ್ವಾರ ನಿರ್ಮಾಣಕ್ಕಾಗಿ ಮಾಡುತ್ತಿರುವ ಪ್ರಯತ್ನಕ್ಕೆ ನಮ್ಮ ಯಾವುದೇ ರೀತಿಯ ಸಮರ್ಥನೆ ಮತ್ತು ಬೆಂಬಲ ಇಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಬಯಸುತ್ತೇವೆ.

ದಯಮಾಡಿ ನೀವು ಪದೇ ಪದೇ ಪಾಕಿಸ್ತಾನ ಹಿಂದೂಸ್ಥಾನ ಎಂದು ಅಮಾಯಕರನ್ನು ಯಾಮಾರಿಸಬೇಡಿ. ಏಕೆಂದರೆ ಅದೀಗ ಹಳೆಯ ವಿಷಯ. ಜನರು ಇಂತಹ ಮಾತುಗಳು ಈಗ ನಂಬುವುದಿಲ್ಲ. ಏಕೆಂದರೆ ನಾವು ಅಪ್ಪಟ ಭಾರತೀಯರು, ನಮಗೆ ಭಾರತ ನಿಮಗಿಂತಲೂ ಹೆಚ್ಚು ಶ್ರೇಷ್ಠ. ನೀವು ಕೇವಲ ಮಾತಿನ ಮೂಲಕ ಭಾರತೀಯರಷ್ಟೆ. ಅದರೆ, ನಾವು ನಮ್ಮ ಹೃದಯದಿಂದ ಭಾರತವನ್ನು, ಇಲ್ಲಿನ ಭೂಮಿಯನ್ನು ಪ್ರೀತಿಸುತ್ತೇವೆ. ಅದು ನಿಮ್ಮಂತಹವರಿಗೆ ಹೇಗೆ ತಾನೆ ಅರ್ಥವಾದೀತು.

ಭಟ್ಕಳದಲ್ಲಿ ಅನಧಿಕೃತ ಕಟ್ಟಡಗಳ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ನೀವು ಎಂದಾದರೂ ಪ್ರಯತ್ನಿದ್ದು ಇದ್ದರೆ ಅದನ್ನು ಸ್ವಲ್ಪ ಸಾರ್ವಜನಿಕರಿಗೆ ತಿಳಿಸಿಬಿಡಿ. ಹಾಗಾದರೆ ಈ ಸಮಸ್ಯೆಗಳನ್ನು ಬಗೆಹರಿಸಲು ನೀವು ಯಾವ ಪ್ರಯತ್ನಗಳನ್ನು ಮಾಡಿದ್ದೀರಿ? ಅನಧಿಕೃತ ಕಟ್ಟಡಗಳು ಯಾಕೆ ನಿರ್ಮಾಣಗೊಂಡವು ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಇಲ್ಲಿನ ಹಲವು ಸಮಸ್ಯೆಗಳಲ್ಲಿ ಇದೂ ಕೂಡ ಒಂದು. ಈ ಸಮಸ್ಯೆ ಇಡೀ ಊರಿನ ಸಮಸ್ಯೆ ಇದು ಹಿಂದೂಗಳಿಗೆ ಮುಸ್ಲಿಮರಿಗೆ ಅಂತ ಬೇರೇನೂ ಇಲ್ಲ. ಇಲ್ಲಿ ಸರ್ವೇ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಕೆಲವೊಂದು ಕಾನೂನು ತೊಡಕುಗಳಿವೆ. ಇದನ್ನು ಸರಿಪಡಿಸುವ ಜವಾಬ್ದಾರಿ ಯಾರದ್ದು ? ಶಾಸಕರಾಗಿರುವ ನಿಮಗೆ ಹಿಂದೂ-ಮುಸ್ಲಿಮ ಬಿಟ್ಟು ಬೇರೆ ಸಮಸ್ಯೆಗಳ ಕಡೆಗೆ ಗಮನ ಹರಿಸಲು ಸಮಯ ಎಲ್ಲಿದೆ ? ಒಂದು ವೇಳೆ ನಿಮಗೆ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಕನಿಕರ ಇದ್ದರೆ ಈಗ ಮಾಡುತ್ತಿರುವುದನ್ನು ಬಿಟ್ಟು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೀದ್ದೀರಿ.

ಭಟ್ಕಳ ನಗರದ ಅಭಿವೃದ್ಧಿಗಾಗಿ ಈ ಕಳೆದ ಐದು ವರ್ಷದಲ್ಲಿ  ಓರ್ವ ಶಾಸಕನಾಗಿ ನಿವೇನು ಮಾಡಿದ್ದೀರಿ ಎಂದು ಯೋಚಿಸಿದ್ದೀರಾ? ನಗರದಲ್ಲಿ ಯುಜಿಡಿ ಸಮಸ್ಯೆ ಇದೆ, ಹಳೆ ಮೀನು ಮಾರುಕಟ್ಟೆಯನ್ನು ಹೊಸ ಮೀನುಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕಾದ ನೀವೇ ಅದನ್ನು ಮಾಡುವಲ್ಲಿ ತೊಡಕಾಗಿದ್ದೀರಿ ಎಂಬ ಪುರಸಭೆ ಅಧ್ಯಕ್ಷರ ಆರೋಪ ಸರಿಯಾಗಿದೆ. ನೀವು ವಿನಾಕಾರಣ ಸ್ಥಳೀಯ ಸಂಸ್ಥೆಯಲ್ಲಿ ಮೂಗು ತೂರಿಸುತ್ತಿದ್ದೀರಿ ಎಂಬುದು ಈಗ ಜಗಜ್ಜಾಹಿರಾಗಿದೆ. ಇದರಿಂದಾಗಿ ಆಗಬೇಕಾಗಿರುವ ಪ್ರಗತಿ, ಅಭಿವೃದ್ಧಿ ಕುಂಠಿತಗೊಂಡಿದೆ. ಈಗ ಮಾಡುವ ಮನಸ್ಸು ನಿಮ್ಮಲ್ಲಿಲ್ಲ ಅಷ್ಟೊಂದು ಸಮಯವೂ ನಿಮ್ಮಲ್ಲಿ ಉಳಿದಿಲ್ಲ.

ಆದರೆ ಈಗೇನು ಮಾಡುವುದು? ಚುನಾವಣೆ ಬಂದಿದೆ ಏನಾದರೂ ಇಶ್ಯೂ(ಸಮಸ್ಯೆ) ಹುಟ್ಟುಹಾಕಿ ಮತ್ತೊಮ್ಮೆ ಅಮಾಯಕ ಹಿಂದೂಗಳನ್ನು ಯಾಮಾರಿಸುವ ಹುನ್ನಾರದಲ್ಲಿದ್ದೀರಿ ಅಷ್ಟೇ. ಮಾನ್ಯ ಶಾಸಕರೇ ದಯಮಾಡಿ ಇದನ್ನೆಲ್ಲ ಬಿಟ್ಟು ಬಿಡಿ. ಇಲ್ಲಿನ ಅಮಾಯಕ ಹಿಂದೂ-ಮುಸ್ಲಿಮ್ ಸಮುದಾಯವನ್ನೂ ನೆಮ್ಮದಿಯಿಂದ ಶಾಂತಿಯುತ ಬದುಕನ್ನು ಬದುಕಲು ಬಿಡಿ ಎಂದು ಅವರುಪ್ರಕಟಣೆಯ ಮೂಲಕ ಮನವಿಯನ್ನೂ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News