×
Ad

ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯಿಂದ ದೂರವಿರಬೇಕಿತ್ತು ಎಂದ ನ್ಯಾ. ಧುಲಿಯಾ

Update: 2022-09-20 21:10 IST
photo : pti

ಹೊಸದಿಲ್ಲಿ,ಸೆ.20:ಹಿಜಾಬ್ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಎಂಟನೇ ದಿನವಾದ ಮಂಗಳವಾರವೂ ಮುಂದುವರಿದಿದ್ದು,ಕರ್ನಾಟಕ ಉಚ್ಚ ನ್ಯಾಯಾಲಯವು ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯ ಗೋಜಿಗೆ ಹೋಗಬಾರದಿತ್ತು ಎಂದು ನ್ಯಾ.ಸುಧಾಂಶು ಧುಲಿಯಾ ಅವರು ವೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು livelaw.in ವರದಿ ಮಾಡಿದೆ

ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಿದ್ಯಾರ್ಥಿನಿಯೋರ್ವಳು ಬರೆದಿದ್ದ ಪ್ರಬಂಧ ಲೇಖನವನ್ನು ನೆಚ್ಚಿಕೊಂಡಿದ್ದನ್ನು ಟೀಕಿಸಿದ ನ್ಯಾ.ಧುಲಿಯಾ,ಹೈಕೋರ್ಟ್ ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯಿಂದ ದೂರವಿರಬೇಕಿತ್ತು. ಅವರು ವಿದ್ಯಾರ್ಥಿನಿಯೋರ್ವಳ ಪ್ರಬಂಧವನ್ನು ನೆಚ್ಚಿಕೊಂಡಿದ್ದಾರೆ ಮತ್ತು ಮೂಲ ಪಠ್ಯವನ್ನು ಪರಿಶೀಲಿಸಿಲ್ಲ. ಇನ್ನೊಂದು ಕಡೆಯವರು ಬೇರೊಂದು ವ್ಯಾಖ್ಯಾನವನ್ನು ನೀಡುತ್ತಿದ್ದಾರೆ. ಯಾವ ವ್ಯಾಖ್ಯಾನ ಸರಿ ಎನ್ನುವುದನ್ನು ಯಾರು ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು. ಹಿಜಾಬ್ ಹೆಚ್ಚೆಂದರೆ ಸಾಂಸ್ಕೃತಿಕ ಆಚರಣೆಯಾಗಿದೆ ಎನ್ನುವುದನ್ನು ಎತ್ತಿ ಹಿಡಿಯಲು ಉಚ್ಚ ನ್ಯಾಯಾಲಯದ ತೀರ್ಪು ಅಮೆರಿಕದ ಇಲ್ಲಿನಾಯ್ಸಾನ ಸಾರಾ ಸ್ಲಿನಿಂಗರ್ ಅವರ ‘ವೇಲ್ಡ್ ವಿಮೆನ್:ಹಿಜಾಬ್,ರಿಲಿಜನ್ ಆ್ಯಂಡ್ ಕಲ್ಚರಲ್ ಪ್ರಾಕ್ಟೀಸ್-2013’ ಶೀರ್ಷಿಕೆಯ ಪ್ರಬಂಧವನ್ನು ಉಲ್ಲೇಖಿಸಿತ್ತು.

ಕರ್ನಾಟಕ ಸರಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉಚ್ಚ ನ್ಯಾಯಾಲಯವು ಅಗತ್ಯ ಧಾರ್ಮಿಕ ಆಚರಣೆ ವಿಷಯಕ್ಕೆ ಹೋಗುವುದನ್ನು ತಪ್ಪಿಸಬಹುದಿತ್ತು ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರಾದರೂ,ಅರ್ಜಿದಾರರೇ ಹಿಜಾಬ್ ಅಗತ್ಯ ಆಚರಣೆಯಾಗಿದೆ ಎಂಬ ವಾದದೊಂದಿಗೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ರಾಜ್ಯಸರಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ನಡೆಸುತ್ತಿದೆ.

ಆಚರಣೆಯೊಂದು ಅಗತ್ಯ ಧಾರ್ಮಿಕ ಆಚರಣೆಯಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ನಿರ್ಧರಿಸಲು ನ್ಯಾಯಾಲಯವು ರೂಪಿಸಿರುವ ಮಾನದಂಡಗಳಿವೆ ಮತ್ತು ಅವುಗಳಿಗೆ ಅನುಗುಣವಾದ ಆಚರಣೆಗಳಿಗೆ ಮಾತ್ರ ರಕ್ಷಣೆಯನ್ನು ನೀಡಬಹುದಾಗಿದೆ ಎಂದು ವಾದಿಸಿದ ಮೆಹ್ತಾ, ಆಚರಣೆಯು ಅನಾದಿ ಕಾಲದಿಂದಲೂ ಆರಂಭವಾಗಿರಬೇಕು, ಧರ್ಮದೊಂದಿಗೆ ಸಹ-ಅಸ್ತಿತ್ವದಲ್ಲಿರಬೇಕು,ಅದು ಇಲ್ಲದಿದ್ದರೆ ಧರ್ಮದ ಸ್ವರೂಪವೇ ಬದಲಾಗುತ್ತದೆ ಎನ್ನುವಷ್ಟು ಅಗತ್ಯವಾಗಿರಬೇಕು ಮತ್ತು ಕಡ್ಡಾಯ ಆಚರಣೆಯಾಗಿರಬೇಕು ಎನ್ನುವುದು ಇಂತಹ ಕೆಲವು ಮಾನದಂಡಗಳಾಗಿವೆ ಎಂದು ಹೇಳಿದರು.

ಅರ್ಜಿದಾರರು ಹಿಜಾಬ್‌ಗೆ ಸಂಬಂಧಿಸಿಂತೆ ಕುರ್‌ಆನ್‌ನಲ್ಲಿಯ ಕೆಲವು ವಚನಗಳನ್ನು ಉಲ್ಲೇಖಿಸಿರುವುದನ್ನು ಪೀಠವು ಬೆಟ್ಟು ಮಾಡಿದಾಗ ಪ್ರತಿಕ್ರಿಯಿಸಿದ ಮೆಹ್ತಾ,ಕುರ್‌ಆನ್‌ನಲ್ಲಿಯ ಕೇವಲ ಉಲ್ಲೇಖವು ಆಚರಣೆಯನ್ನು ಅಗತ್ಯವಾಗಿಸುವುದಿಲ್ಲ. ಅದು ಅಷ್ಟೊಂದು ಕಡ್ಡಾಯವಾಗಿದೆ ಎಂದು ಅವರು ತೋರಿಸಬೇಕಾಗುತ್ತದೆ. ನಮ್ಮ ಬಳಿ ಅಂಕಿಅಂಶಗಳಿವೆ,ನಿರ್ದೇಶವನ್ನು ಪಾಲಿಸದಿದ್ದಕ್ಕಾಗಿ ಬಹಿಷ್ಕರಿಸಲಾಗಿಲ್ಲ. ಅದು ಅನುಮತಿಸಬಹುದಾದ ಅಥವಾ ಹೆಚ್ಚೆಂದರೆ ಆದರ್ಶ ಆಚರಣೆಯಾಗಬಹುದು,ಆದರೆ ಅಗತ್ಯ ಆಚರಣೆಯಲ್ಲ ಎಂದರು. ಇರಾನ್‌ನಂತಹ ದೇಶಗಳಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಹೋರಾಡುತ್ತಿದ್ದಾರೆ ಎಂದೂ ಅವರು ಉಲ್ಲೇಖಿಸಿದರು. ‘ಅದು ಕುರ್‌ಆನ್‌ನಲ್ಲಿ ಬರೆಯಲ್ಪಟ್ಟಿದೆ ಮತ್ತು ಕುರ್‌ಆನ್‌ನಲ್ಲಿ ಏನನ್ನು ಬರೆಯಲಾಗಿದೆಯೋ ಅದರ ಪಾಲನೆ ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಅದನ್ನು ನಿರ್ಧರಿಸುವುದು ನಮ್ಮ ಕೆಲಸವಲ್ಲ ’ ಎಂದು ನ್ಯಾ.ಧುಲಿಯಾ ಹೇಳಿದರು.

ಪ್ರಕರಣದ ವಿಚಾರಣೆಯು ಬುಧವಾರ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News