ನಮ್ಮ ಸಾರ್ವಭೌಮ ಮಾರ್ಗದಿಂದ ವಿಮುಖವಾಗುವುದಿಲ್ಲ ಎಂದ ರಶ್ಯ ಅಧ್ಯಕ್ಷ ಪುಟಿನ್

Update: 2022-09-20 17:19 GMT

ಮಾಸ್ಕೊ, ಸೆ.20: ಅಂತರಾಷ್ಟ್ರೀಯ ವೇದಿಕೆಯಲ್ಲಿ ರಶ್ಯ ತನ್ನ ಸಾರ್ವಭೌಮ ನಡೆಯನ್ನು ಮುಂದುವರಿಸಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ. ಕೊರೋನ ಸಾಂಕ್ರಾಮಿಕದ ಕಾರಣದಿಂದ ವಿಶ್ವಸಂಸ್ಥೆಯ ಮಹಾಸಭೆಯ ಅಧಿವೇಶನ 2 ವರ್ಷ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದಿದ್ದು ಈ ವರ್ಷ ಮತ್ತೆ ಜಾಗತಿಕ ಮುಖಂಡರ ವೈಯಕ್ತಿಕ ಹಾಜರಾತಿ ಮೂಲಕ ನಡೆಯುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ ಪುಟಿನ್, ರಶ್ಯದ ಮಟ್ಟಿಗೆ ಹೇಳುವುದಾದರೆ ನಾವು ನಮ್ಮ ಸಾರ್ವಭೌಮ ನಡೆಯಿಂದ ವಿಮುಖವಾಗುವುದಿಲ್ಲ ಎಂದರು. ರಶ್ಯವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿದ್ದು ಜಾಗತಿಕ ಸಹಕಾರ, ಜಾಗತಿಕ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ತೀವ್ರವಾದ ಪ್ರಾದೇಶಿಕ ಸಂಘರ್ಷಗಳ ಇತ್ಯರ್ಥಕ್ಕೆ ಕೊಡುಗೆ ನೀಡುತ್ತದೆ ಎಂದು ಪುಟಿನ್ ಹೇಳಿದ್ದಾರೆ.

  ಈ ವರ್ಷ ರಶ್ಯದ ಪರ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ರಶ್ಯಕ್ಕೆ ನೂತನವಾಗಿ ನೇಮಕಗೊಂಡಿರುವ ವಿದೇಶಿ ರಾಯಭಾರಿಗಳನ್ನುದ್ದೇಶಿಸಿ ಮಾತನಾಡಿದ ಪುಟಿನ್, ವಿದೇಶದಲ್ಲಿ ಅಮೆರಿಕದ ಪಾತ್ರದಿಂದ ಜಾಗತಿಕ ಅಭಿವೃದ್ಧಿಗೆ ತೊಡಕಾಗಿದೆ ಎಂದರು. ದುರದೃಷ್ಟವಶಾತ್, ಅಧಿನಾಯಕರು ಎಂಬ ಪಾತ್ರವನ್ನು ಉಳಿಸಿಕೊಳ್ಳಲು ಬಯಸುವವರು ಬಹುಧ್ರುವೀಯ ಪ್ರಪಂಚದ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಈ ಅಧಿನಾಯಕರು ಲ್ಯಾಟಿನ್ ಅಮೆರಿಕ, ಯುರೋಪ್, ಏಶ್ಯಾ ಮತ್ತು ಆಫ್ರಿಕಾದಲ್ಲಿ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆದಿದ್ದಾರೆ ಎಂದು ಪಾಶ್ಚಿಮಾತ್ಯ ದೇಶ ಹಾಗೂ ಅಮೆರಿಕವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News