ಚೀನೀ ಭಾಷೆಯ ಶಿಕ್ಷಕರನ್ನು ಒದಗಿಸಲು ತೈವಾನ್‌ಗೆ ಬ್ರಿಟನ್ ಕೋರಿಕೆ ಲಂಡನ್

Update: 2022-09-20 18:24 GMT
pti

ಸೆ.20: ಬ್ರಿಟನ್‌ಗೆ ಚೀನೀ ಭಾಷೆಯ ಶಿಕ್ಷಕರನ್ನು ಒದಗಿಸುವ ನಿಟ್ಟಿನಲ್ಲಿ ಬ್ರಿಟನ್‌ನ ಸಂಸದರ ತಂಡವೊಂದು ತೈವಾನ್ ಜತೆ ಮಾತುಕತೆ ನಡೆಸುತ್ತಿದೆ. ಕನ್ಫ್ಯೂಷಿಯಸ್ ಸಂಸ್ಥೆಗಳನ್ನು (ಚೀನಾ ಸರಕಾರದಿಂದ ನೇರ ಅಥವಾ ಪರೋಕ್ಷ ಅನುದಾನ ಪಡೆಯುತ್ತಿರುವ ಸಂಸ್ಥೆಗಳು) ಹಂತಹಂತವಾಗಿ ಮುಚ್ಚುವ ಬ್ರಿಟನ್ ಸರಕಾರದ ನಿರ್ಧಾರಕ್ಕೆ ಪೂರಕವಾಗಿ ಈ ಮಾತುಕತೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೀನಾ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧ ಕ್ಷೀಣಿಸುತ್ತಿರುವುದರಿಂದ ಚೀನಾ ಸರಕಾರ ಸಂಯೋಜಿತ ‘ಕನ್ಫ್ಯೂಷಿಯಸ್ ಭಾಷಾ ಕಲಿಕೆ ಮತ್ತು ಬೋಧನಾ ಯೋಜನೆ’ಯು ಬ್ರಿಟನ್ ಸರಕಾರದ ಪರಿಶೀಲನೆಯಲ್ಲಿದೆ. ಬ್ರಿಟನ್‌ನಾದ್ಯಂತ ಇಂತಹ 30 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ. ಇಂತಹ ಸಂಸ್ಥೆಗಳು ಬ್ರಿಟನ್‌ನ ಆತಿಥೇಯ ವಿವಿ, ಚೀನಾದ ಪಾಲುದಾರ ವಿವಿ ಮತ್ತು ಬೀಜಿಂಗ್ ಮೂಲದ ಚೈನೀಸ್ ಇಂಟರ್‌ನ್ಯಾಷನಲ್ ಎಜುಕೇಷನ್ ಫೌಂಡೇಷನ್ ನಡುವಿನ ಜಂಟಿ ಉಪಕ್ರಮವಾಗಿರುತ್ತದೆ. ಬ್ರಿಟನ್‌ನ ಹಾಲಿ ಪ್ರಧಾನಿ ಲಿರ್ ಟ್ರಸ್ 2014ರಲ್ಲಿ ಕನ್ಫ್ಯೂಷಿಯಸ್ ತರಗತಿಗಳ ನೆಟ್‌ರ್ಕ್ ಬಗ್ಗೆ ಶ್ಲಾಘಿಸಿದ್ದರು. ಆಗ ಬ್ರಿಟನ್‌ನ ಶಿಕ್ಷಣ ಸಚಿವೆಯಾಗಿದ್ದ ಟ್ರಸ್, ಇಂತಹ ಸಂಸ್ಥೆಗಳು ಬ್ರಿಟನ್‌ನಲ್ಲಿ ಚೀನಾ ಭಾಷೆಗಳಿಗೆ ಬಲವಾದ ಮೂಲಸೌಕರ್ಯ ನಿರ್ಮಿಸುತ್ತವೆ ಎಂದಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ, ಈಗ ಅವರು ಚೀನಾವನ್ನು ರಶ್ಯದ ಗುಂಪಿನಲ್ಲೇ ವರ್ಗೀಕರಿಸಿ, ಚೀನಾವು ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ತೀವ್ರ ಬೆದರಿಕೆ ಎಂದು ಘೋಷಿಸಲು ಸಿದ್ಧರಾಗಿದ್ದಾರೆ ಎಂದು ವರದಿ ಹೇಳಿದೆ.

ಶಾಲೆಗಳಲ್ಲಿ ಚೀನಾ ಭಾಷೆಯ ಬೋಧನೆಗೆ ಬ್ರಿಟಿಷ್ ಸರಕಾರದ ಬಹುತೇಕ ವೆಚ್ಚವನ್ನು ವಿಶ್ವವಿದ್ಯಾನಿಲಯ ಆಧಾರಿತ ಕನ್ಫ್ಯೂಷಿಯಸ್ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುತ್ತದೆ ಎಂದು ಚೀನಾ ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿಯನ್ನು ಉಲ್ಲೇಖಿಸಿ ತೈಪೆ ಟೈಮ್ಸ್ ವರದಿ ಮಾಡಿದೆ. ಅಂದಾಜಿನ ಪ್ರಕಾರ, 2015ರಿಂದ 2024ರ ಅವಧಿಗೆ ಕನಿಷ್ಟ 8.1 ಮಿಲಿಯನ್ ಡಾಲರ್ ನಿಧಿಯನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ. ಹೊಸ ಪ್ರಸ್ತಾವನೆಯಡಿ, ಈ ನಿಧಿಯನ್ನು ತೈವಾನ್‌ಗೆ ಸಂಬಂಧಿಸಿದ ಯೋಜನೆಗೆ ಬಳಸಲು ನಿರ್ಧರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News