ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರ ತದ್ರೂಪಿ ವಿರುದ್ಧ ಪ್ರಕರಣ ದಾಖಲು

Update: 2022-09-21 12:41 GMT
Photo Credit: Facebook/@Vijay Mane

ಮುಂಬೈ: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಪುಣೆ ಜಿಲ್ಲೆಯ ಹವೇಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ  37 ವರ್ಷದ ವಿಜಯ್‌ ಮನೆ ಎಂಬವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ಅವರ ತದ್ರೂಪಿ ಎಂದೇ ಖ್ಯಾತಿ ಪಡೆದವರು. ಶಿಂಧೆ ಅವರಂತೆಯೇ ಕಾಣುವ ವಿಜಯ್‌ ಅವರನ್ನು ಕಂಡಾಗಲೆಲ್ಲಾ ಜನರೆಲ್ಲಾ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಾರೆ. ಆದರೆ ಈಗ ಇದೇ ವಿಜಯ್‌ಗೆ ಮುಳುವಾಗಿದೆ.

ಪುಣೆ ಪೊಲೀಸರು ಸೋಮವಾರ ವಿಜಯ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಗ್ಯಾಂಗ್‌ಸ್ಟರ್‌ ಒಬ್ಬನ ಜೊತೆಗೆ ಫೋಟೋ ಕ್ಲಿಕ್ಕಿಸಿ ನಂತರ ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಿ ಮುಖ್ಯಮಂತ್ರಿ ಶಿಂಧೆ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆಂಬ ಆರೋಪವನ್ನು ವಿಜಯ್‌ ವಿರುದ್ಧ ಹೊರಿಸಲಾಗಿದ್ದು ಅವರ ವಿರುದ್ಧ ಐಪಿಸಿಯ ಸೆಕ್ಷನ್‌ 419, 469, 500, 501 ಹಾಗೂ ಐಟಿ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಆದರೆ ತಮ್ಮ ವಿರುದ್ಧದ ಆರೋಪವನ್ನು ವಿಜಯ್‌ ನಿರಾಕರಿಸಿದ್ದಾರೆ. ʻʻನಾನು ಅಹ್ಮದ್‌ನಗರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದೆ. ಆಗ ಎಲ್ಲರೂ ನಿಜವಾಗಿಯೂ ಸಿಎಂ ಬಂದಿದ್ದಾರೆಂದು ನನಗೆ ದಾರಿ ಮಾಡಿಕೊಟ್ಟರು. ನಾನು ಸ್ಥಳೀಯ ಠಾಣೆಗೆ ತೆರಳಿ ಅಲ್ಲಿ ಲೋಕಾಭಿರಾಮವಾಗಿ ಮಾತನಾಡಿದೆ. ಅಲ್ಲಿ ಬಹಳಷ್ಟು ಜನರಿದ್ದರು ನನ್ನ ಬಳಿ ಯಾರಿದ್ದರು ಎಂದು ತಿಳಿದಿಲ್ಲ, ಯಾರೋ ಚಿತ್ರ ಕ್ಲಿಕ್ಕಿಸಿ ವೈರಲ್‌ ಮಾಡಿದ್ದಾರೆ, ಆದರೆ ಪೊಲೀಸರು ನಾನು ಚಿತ್ರ ಕ್ಲಿಕ್ಕಿಸಿ ಅದನ್ನು ವೈರಲ್‌ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ಬಿಲ್ಡರ್‌ಗಳು ಹಾಗೂ ನಿರ್ಮಾಣ ಕಂಪೆನಿಗಳಿಗೆ ಸ್ಥಳೀಯ ಸಬ್-ಕಾಂಟ್ರಾಕ್ಟರ್‌ ಆಗಿ ವಿಜಯ್‌ ಸೇವೆ ಕೆಲಸ ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News