ಗುಜರಾತ್ ವಿಧಾನಸಭೆ: ನೌಕರರ ಸಮಸ್ಯೆ ಬಗ್ಗೆ ಚರ್ಚೆಗೆ ಆಗ್ರಹಿಸಿದ ಜಿಗ್ನೇಶ್ ಮೇವಾನಿ ಸಹಿತ 14 ಶಾಸಕರ ಅಮಾನತು

Update: 2022-09-21 15:06 GMT
Photo: Twitter/@jigneshmevani80

ಅಹಮದಾಬಾದ್: ಅಶಿಸ್ತಿನ ವರ್ತನೆ ಆರೋಪದ ಮೇಲೆ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ (Jignesh Mevani) ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ(Congress) 14 ಶಾಸಕರನ್ನು ಗುಜರಾತ್ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಗುಜರಾತ್ ವಿಧಾನಸಭೆಯ(Gujarat Assembly) ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷದ ನಾಯಕ ಸುಖರಾಮ್ ರತ್ವಾ ಅವರು ಧರಣಿ ನಿರತ ಸರ್ಕಾರಿ ನೌಕರರು, ರೈತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಾಜಿ ಸೈನಿಕರ ಸಮಸ್ಯೆಗಳ ಬಗ್ಗೆ ಅರ್ಧ ಗಂಟೆ ವಿಶೇಷ ಚರ್ಚೆಗೆ ಒತ್ತಾಯಿಸಿದರು.

ಸ್ಪೀಕರ್ ನಿಮಾಬೆನ್ ಆಚಾರ್ಯ ಅವರು ರತ್ವಾ ಅವರ ಬೇಡಿಕೆಯನ್ನು ನಿರಾಕರಿಸಿದಾಗ, ಮೇವಾನಿ ಮತ್ತು ಇತರ ಕಾಂಗ್ರೆಸ್ ಶಾಸಕರು ಸದನದ ಬಾವಿಯ ಬಳಿ ಧಾವಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

‘ನೌಕರರಿಗೆ ನ್ಯಾಯ ಕೊಡಿಸಿ’, ‘ಅರಣ್ಯ ಸಿಬ್ಬಂದಿಗೆ ನ್ಯಾಯ ಕೊಡಿಸಿ’, ‘ಮಾಜಿ ಸೈನಿಕರಿಗೆ ನ್ಯಾಯ ಕೊಡಿಸಿ’ ಎಂಬ ಘೋಷಣಾ ಫಲಕಗಳನ್ನು ಎತ್ತಿ ಹಿಡಿದ ಶಾಸಕರು ಚರ್ಚೆಗೆ ಪಟ್ಟು ಹಿಡಿದರು.

ಬಹುತೇಕ ಎಲ್ಲಾ ಇಲಾಖೆಗಳ ನೌಕರರು ತಮ್ಮ ಬಾಕಿ ಇರುವ ಸಮಸ್ಯೆಗಳ ಬಗ್ಗೆ ಧರಣಿ ನಡೆಸುತ್ತಿರುವಾಗ, ಸದನದಲ್ಲಿ ಆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಏಕೆ ಸಿದ್ಧವಾಗಿಲ್ಲ?  ಎಂದು ಪ್ರತಿಭಟನಾ ನಿರತ ಶಾಸಕರು ಪ್ರಶ್ನಿದ್ದಾರೆ.

ಸ್ಪೀಕರ್ ನಿರ್ದೇಶನದಂತೆ ಪ್ರತಿಪಕ್ಷಗಳ ಶಾಸಕರು ತಮ್ಮ ಸ್ಥಾನಗಳಿಗೆ ಮರಳಲು ನಿರಾಕರಿಸಿದಾಗ, ಗುಜರಾತ್ ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ತ್ರಿವೇದಿ ಅವರು ಬಾವಿಯಲ್ಲಿ ಕುಳಿತಿರುವ ಶಾಸಕರನ್ನು ಅಮಾನತುಗೊಳಿಸುವ ಬಗ್ಗೆ ಪ್ರಸ್ತಾಪಿಸಿದರು.

ಬಹುಮತದ ಧ್ವನಿ ಮತದೊಂದಿಗೆ ಆಚಾರ್ಯ ಅವರು ಮೇವಾನಿ ಮತ್ತು ಇತರ 14 ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News