ಸಂಸದೀಯ ಸಮಿತಿಗಳ ಅಧ್ಯಕ್ಷತೆಗಳನ್ನು ಕಳೆದುಕೊಳ್ಳಲಿರುವ ಕಾಂಗ್ರೆಸ್,ಟಿಎಂಸಿ

Update: 2022-09-21 15:49 GMT
photo : PTI

  ಹೊಸದಿಲ್ಲಿ,ಸೆ.21: ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸಲಾಗುತ್ತಿದ್ದು,ಕಾಂಗ್ರೆಸ್ ಪಕ್ಷವು ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಿದೆ. ಈ ಬಗ್ಗೆ ಸರಕಾರವು ಕಾಂಗ್ರೆಸ್‌ಗೆ ತಿಳಿಸಿದೆ. ಬಲ್ಲ ಮೂಲಗಳು ತಿಳಿಸಿರುವಂತೆ ಟಿಎಂಸಿಯೂ ತಾನು ಹೊಂದಿರುವ ಏಕೈಕ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.ಎಂದು ವರದಿಯಾಗಿದೆ.

 ಸರಕಾರದ ಕ್ರಮವನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಸದನ ನಾಯಕ ಪಿಯೂಷ ಗೋಯಲ್ ಅವರಿಗೆ ಪತ್ರವನ್ನು ಬರೆದಿರುವ ಕಾಂಗ್ರೆಸ್, ಗೃಹ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಪ್ರಧಾನ ಪ್ರತಿಪಕ್ಷದವರಾಗಿರುತ್ತಾರೆ ಎನ್ನುವುದನ್ನು ನೆನಪಿಸಿದೆ. ಮೂಲಗಳು ತಿಳಿಸಿರುವಂತೆ ಸೆ.16ರಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ದೂರವಾಣಿ ಕರೆಯನ್ನು ಮಾಡಿದ್ದ ಗೋಯಲ್,ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಾಗಿರುವುದರಿಂದ ಅದಕ್ಕೆ ಒಂದು ಸಮಿತಿಯ ಅಧ್ಯಕ್ಷ ಸ್ಥಾನವನ್ನು ಮಾತ್ರ ನೀಡಬಹುದು ಎಂದು ತಿಳಿಸಿದ್ದಾರೆ. ಗೃಹ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಬೇರೊಂದು ಪ್ರತಿಪಕ್ಷದಿಂದ ಆಯ್ಕೆ ಮಾಡಲಾಗುವುದು. ಮಾರ್ಚ್‌ನಲ್ಲಿ ರಾಜ್ಯಸಭೆಯಲ್ಲಿ 34 ಕಾಂಗ್ರೆಸ್ ಸದಸ್ಯರಿದ್ದು,ಅವರ ಸಂಖ್ಯೆ ಈಗ 31ಕ್ಕೆ ಕುಸಿದಿದೆ.

  ಮೂಲಗಳು ತಿಳಿಸಿರುವಂತೆ ಖರ್ಗೆ ಅವರು ತನ್ನ ವಿರೋಧವನ್ನು ವ್ಯಕ್ತಪಡಿಸಿ ಗೋಯಲ್‌ಗೆ ಪತ್ರವನ್ನು ಬರೆದಿದ್ದಾರೆ. ರಾಜಕೀಯ ಪಕ್ಷಗಳ ಸಂಖ್ಯಾಬಲವು ಆಯಾ ಪಕ್ಷಕ್ಕೆ ಅಧ್ಯಕ್ಷ ಸ್ಥಾನಗಳ ಹಂಚಿಕೆಯನ್ನು ನಿರ್ಧರಿಸುತ್ತದೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರಾದರೂ, ಪ್ರಜಾಪ್ರಭುತ್ವದಲ್ಲಿ ‘ಕೊಟ್ಟು ತೆಗೆದುಕೊಳ್ಳುವ ’ನೀತಿಯು ಸಂಸತ್ತಿನಂತಹ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಂಪ್ರದಾಯಿಕವಾಗಿಯೂ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರು ಪ್ರಧಾನ ಪ್ರತಿಪಕ್ಷಗಳವರೇ ಆಗಿದ್ದಾರೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಲೋಕಸಭಾ ವ್ಯಾಪ್ತಿಯಲ್ಲಿರುವ ಮಾಹಿತಿ ಮತ್ತು ತಂತ್ರಜ್ಞಾನ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದೆ. ಆದರೆ ಸಮಿತಿಯ ಪ್ರಸಕ್ತ ಅಧ್ಯಕ್ಷ ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿರುವುದರಿಂದ ಹುದ್ದೆಯಲ್ಲಿ ಮುಂದುವರಿಯಲು ಅವರಿಗೆ ಪಕ್ಷವು ಅವಕಾಶ ನೀಡುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಈ ನಡುವೆ ಟಿಎಂಸಿ ಆಹಾರ,ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ಪೂರೈಕೆ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷತೆಯನ್ನು ಕಳೆದುಕೊಳ್ಳುವ ಬಲವಾದ ಲಕ್ಷಣಗಳಿವೆ. ಪ್ರಸ್ತುತ ಲೋಕಸಭೆಯಲ್ಲಿ ಟಿಎಂಸಿಯ ಸದನ ನಾಯಕ ಸುದೀಪ ಬಂಡೋಪಾಧ್ಯಾಯ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸುದಿಸಂಸ್ಥೆಯೊಂದಿಗೆ ಮಾತನಾಡಿದ ಬಂಡೋಪಾಧ್ಯಾಯ ಅವರು, ‘ಕೆಲವು ದಿನಗಳ ಹಿಂದೆ ಬಿಜೆಪಿಯ ಕೇಂದ್ರ ಸಚಿವರೋರ್ವರು ತನಗೆ ಕರೆ ಮಾಡಿ ಟಿಎಂಸಿಯು ಪಶ್ಚಿಮ ಬಂಗಾಳ ವಿಧಾನಸಭೆಯ ಯಾವುದೇ ಸಮಿತಿಯ ಅಧ್ಯಕ್ಷತೆಯನ್ನು ಬಿಜೆಪಿಗೆ ನೀಡಿಲ್ಲ ಎಂದು ಆರೋಪಿಸಿದ್ದರು. ಅವರು ಆಹಾರ ಸಮಿತಿಯನ್ನು ನಮ್ಮಿಂದ ಕಿತ್ತುಕೊಳ್ಳಲು ಬಯಸಿದರೆ ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ’ ಎಂದು ಹೇಳಿದರು.

 ಮೂಲಗಳು ತಿಳಿಸಿರುವಂತೆ ಟಿಎಂಸಿ ಪ.ಬಂ.ವಿಧಾನಸಭೆಯಲ್ಲಿ ಸಮಿತಿಗಳನ್ನು ರಚಿಸಿದ ರೀತಿಗೆ ಬಿಜೆಪಿಯು ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದೆ. ವಿಧಾನಸಭೆ ಸಮಿತಿಗಳ ರಚನೆಯಲ್ಲಿ ತನ್ನನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ ಎಂದು ಪ.ಬಂ.ಬಿಜೆಪಿ ಭಾವಿಸಿದೆ. ಆಡಳಿತ ಟಿಎಂಸಿ ಹೇಳಿರುವಂತೆ ಅದು ಬಿಜೆಪಿಗೆ ಒಂಭತ್ತು ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ನೀಡಿತ್ತು. ಈ ಪೈಕಿ ಮುಕುಲ್ ರಾಯ್ ಅವರು ಟಿಎಂಸಿಗೆ ವಾಪಸಾಗಿದ್ದರೆ,ಇತರರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಸ್ತುತ ಸಂಸತ್ತಿನಲ್ಲಿ ಒಟ್ಟು 24 ಸಂಸದೀಯ ಸ್ಥಾಯಿ ಸಮಿತಿಗಳಿದ್ದು,ಈ ಪೈಕಿ 16 ಸಮಿತಿಗಳಿಗೆ ಲೋಕಸಭಾ ಮತ್ತು ಎಂಟು ಸಮಿತಿಗಳಿಗೆ ರಾಜ್ಯಸಭೆ ಸದಸ್ಯರು ಅಧ್ಯಕ್ಷರಾಗಿದ್ದಾರೆ. ಪ್ರತಿ ವರ್ಷ ಸಂಸದೀಯ ಸಮಿತಿಗಳನ್ನು ಪುನರ್‌ರಚಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News