ಆರ್ಥಿಕ ಹಿಂಜರಿತ ಭೀತಿ: ಬಡ್ಡಿದರ ಹೆಚ್ಚಿಸಿದ ಅಮೆರಿಕದ ಫೆಡರಲ್ ರಿಸರ್ವ್

Update: 2022-09-22 02:59 GMT
(US Federal Reserve)

ವಾಷಿಂಗ್ಟನ್: ಅಮೆರಿಕದ ಫೆಡರಲ್ ರಿಸರ್ವ್ (US Federal Reserve) ಬುಧವಾರ ಬಡ್ಡಿದರವನ್ನು ಮತ್ತೆ ಹೆಚ್ಚಿಸಿದೆ. ಆರ್ಥಿಕ ಹಿಂಜರಿತದ ಭೀತಿ ಹುಟ್ಟುಹಾಕಿರುವ ಬೆಲೆ ಹೆಚ್ಚಳ ವಿರುದ್ಧದ ಹೋರಾಟದ ಅಂಗವಾಗಿ ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಏರಿಕೆ ಮಾಡಲಾಗುವುದು ಎಂದು ಪ್ರಕಟಿಸಿದೆ.

ಫೆಡ್‍ ಬ್ಯಾಂಕಿನ ನೀತಿ ರೂಪಿಸುವ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸತತ ಮೂರನೇ ಬಾರಿ ಬಡ್ಡಿದರವನ್ನು 0.75ರಷ್ಟು ಹೆಚ್ಚಿಸಿದ್ದು, ಕಳೆದ 40 ವರ್ಷಗಳಲ್ಲೇ ದಾಖಲಾಗಿರುವ ಗರಿಷ್ಠ ಹಣದುಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮುಂದುವರಿಸಿದೆ. ಈ ಹೆಚ್ಚಳದಿಂದಾಗಿ ನೀತಿ ದರ ಶೇಕಡ 3.0-3.25ಕ್ಕೆ ಹೆಚ್ಚಿದ್ದು, "ಈ ಹೆಚ್ಚಳದ ನಿರೀಕ್ಷೆ ಮುಂದುವರಿಯುವುದು ಹೆಚ್ಚು ಸೂಕ್ತ" ಎಂದು ಎಫ್‍ಓಎಂಸಿ ಅಭಿಪ್ರಾಯಪಟ್ಟಿದೆ.

ಗಗನಮುಖಿ ಬೆಲೆಹೆಚ್ಚಳ ಅಮೆರಿಕದ ಕುಟುಂಬಗಳು ಹಾಗೂ ವಹಿವಾಟುಗಳನ್ನು ಹಿಂಡುತ್ತಿದ್ದು, ಮುಂದಿನ ನವೆಂಬರ್‌ ನಲ್ಲಿ ಮಧ್ಯಾವಧಿ ಕಾಂಗ್ರೆಸ್ ಚುನಾವಣೆ ಎದುರಿಸಬೇಕಾಗಿರುವ ಅಧ್ಯಕ್ಷ ಜೋ ಬೈಡನ್ ಅವರಿಗೆ ರಾಜಕೀಯ ಹೊರೆಯಾಗುತ್ತಿದೆ. ಆದರೆ ವಿಶ್ವದ ಅತಿದೊಡ್ಡ ಆರ್ಥಿಕತೆಯ ಕುಗ್ಗುವಿಕೆಯು ಬೈಡನ್, ಫೆಡ್‍ಬ್ಯಾಂಕ್‍ನ ವಿಶ್ವಾಸಾರ್ಹತೆ ಮತ್ತು ವಿಸ್ತೃತವಾಗಿ ವಿಶ್ವಕ್ಕೆ ದೊಡ್ಡ ಹೊಡೆತವಾಗಲಿದೆ.

ಆರ್ಥಿಕತೆಯನ್ನು ತಣಿಸಲು ಮತ್ತು 1970ರ ಹಾಗೂ 1980ರ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು ರಭಸದ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪಾವೆಲ್ ಸ್ಪಷ್ಟಪಡಿಸಿದ್ದಾರೆ. 1970ರ ಹಾಗೂ 1980ರ ದಶಕದ ಆರಂಭದಲ್ಲಿ ಅಮೆರಿಕದ ಹಣದುಬ್ಬರ ನಿಯಂತ್ರಣ ತಪ್ಪಿ ಬೆಳೆದಿತ್ತು ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News