ಇಂತಹ ವಿನಾಶ ಎಲ್ಲೂ ಕಂಡಿಲ್ಲ: ಪ್ರವಾಹಪೀಡಿತ ಪಾಕಿಸ್ತಾನಕ್ಕೆ ಭೇಟಿ ನೀಡಿದ ಹಾಲಿವುಡ್‌ ನಟಿ ಆ್ಯಂಜೆಲಿನಾ ಪ್ರತಿಕ್ರಿಯೆ

Update: 2022-09-22 12:40 GMT
Photo credit: Twitter/@JatIkhwan 

ಇಸ್ಲಾಮಾಬಾದ್: ‌"ಈ ರೀತಿಯ ವಿನಾಶವನ್ನು ನಾನು ಎಲ್ಲಿಯೂ ನೋಡಿಲ್ಲ,ʼʼ ಎಂದು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ(Pakistan) ಭೇಟಿ ನೀಡಿದ ಹಾಲಿವುಡ್‌ ನಟಿ ಆ್ಯಂಜೆಲಿನಾ ಜೋಲಿ(Angelina Jolie) ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಪ್ರವಾಹ ಸೃಷ್ಟಿಸಿದ ಅನಾಹುತವು ಜಗತ್ತಿಗೆ ಹವಾಮಾನ ಬದಲಾವಣೆ ಕುರಿತು ಎಚ್ಚರಿಕೆಯ ಕರೆಗಂಟೆಯಾಗಬೇಕು ಎಂದು ಹೇಳಿದ ಅವರು ಸಂತ್ರಸ್ತರನ್ನು ಭೇಟಿಯಾದರಲ್ಲದೆ ದೇಶಕ್ಕೆ ಇನ್ನಷ್ಟು ಅಂತಾರಾಷ್ಟ್ರೀಯ ಸಹಾಯ ಹರಿದು ಬರಬೇಕೆಂದು ಮನವಿ ಮಾಡಿದರು. ಈ ವರ್ಷದ ಪ್ರವಾಹದಲ್ಲಿ  1600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ 70 ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

"ಹವಾಮಾನ ಬದಲಾವಣೆಯೆಂಬುದು ವಾಸ್ತವ, ಅದು ಬರುತ್ತಿದೆ ಹಾಗೂ ಇಲ್ಲಿದೆ,ʼʼ ಎಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಹಲವು ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ ನಂತರ ಜೋಲಿ ಹೇಳಿದರು.

ವಿಶ್ವ ಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಷನರ್‌ ಅವರನ್ನು ಪ್ರತಿನಿಧಿಸುತ್ತಿರುವ ಆ್ಯಂಜೆಲಿನಾ ಜೋಲಿ ಅವರು ಅತ್ಯಂತ ಹೆಚ್ಚು ಬಾಧಿತ ಪ್ರದೇಶವಾದ ದಕ್ಷಿಣ ಸಿಂಧ್‌ ಪ್ರಾಂತ್ಯಕ್ಕೆ ಭೇಟಿ ನೀಡಿ ಅಲ್ಲಿನ ಶಿಬಿರಗಳಲ್ಲಿ ವಾಸಿಸುತ್ತಿರುವ ನಿರ್ವಸಿತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.

ʻʻನಾನು ಜನರೊಂದಿಗೆ ಮಾತನಾಡಿದ್ದೇನೆ. ಮುಂದಿನ ಕೆಲ ವಾರಗಳಲ್ಲಿ ಇನ್ನಷ್ಟು ಸಹಾಯ ಬರದೇ ಇದ್ದರೆ ಅವರು ಇನ್ನಷ್ಟು ಕಷ್ಟಕ್ಕೊಳಗಾಗಲಿದ್ದಾರೆ,ʼʼ ಎಂದು ಜೋಲಿ ಹೇಳಿದರು.

ಆ್ಯಂಜೆಲಿನಾ ಜೋಲಿ ಈ ಹಿಂದೆ 2010ರಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರನ್ನು ಹಾಗೂ 2005ರ ಭೂಕಂಪ ಸಂತ್ರಸ್ತರನ್ನು ಕಂಡು ಮಾತನಾಡಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಮೌಲ್ವಿಯೊಬ್ಬರನ್ನು ಮಸೀದಿಯಲ್ಲಿ ಭೇಟಿ ಮಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News