ಗ್ರಾಮ ಒನ್ ಕೇಂದ್ರದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ : ಡಿಎಚ್‌ಒ ಡಾ. ಕಿಶೋರ್ ಕುಮಾರ್

Update: 2022-09-22 12:41 GMT

ಮಂಗಳೂರು, ಸೆ. 22: ದೇಶಾದ್ಯಂತ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಈಗಾಗಲೇ ಆರಂಭವಾಗಿದೆ. ಹೀಗಾಗಿ, ಆಯುಷ್ಮಾನ್ ಕಾರ್ಡ್ ಪಡೆದಿರುವ ಜಿಲ್ಲೆಯ ನಾಗರಿಕರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದ ಮೂಲಕ ಉಚಿತವಾಗಿ ಹೊಸ ಕಾರ್ಡ್ ಪಡೆದುಕೊಳ್ಳಬೇಕಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಎಬಿಎಚ್‌ಎ ಕಾರ್ಡ್ ನೋಂದಾವಣಿ ಶಿಬಿರ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಟಿಎಂ ಕಾರ್ಡ್ ರೀತಿಯ ಡಿಜಿಟಲ್ ಮಾದರಿಯ ಕಾರ್ಡ್ ವಿತರಿಸಲಾಗುತ್ತಿದೆ. ಈ ಕಾರ್ಡ್ ಮೂಲಕ ದೇಶದ ಯಾವುದೇ ಪ್ರದೇಶದಲ್ಲಿಯೂ ಆಯುಷ್ಮಾನ್ ಯೋಜನೆಯಲ್ಲಿ ಆರೋಗ್ಯ ಸೇವೆ ಪಡೆಯಲು ಸಾಧ್ಯ. ಆಯುಷ್ಮಾನ್ ಯೋಜನೆಯಡಿ ಹಲವು ರೋಗಗಳಿಗೆ ಸರಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಅಲ್ಲಿ ಸಿಗದ ಚಿಕಿತ್ಸೆಗೆ ಮಾತ್ರ ಆಯಾ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗೆ ರೆಫರಲ್ ಮಾಡುತ್ತಾರೆ. ಈ ವಿಧಾನ ಆನ್‌ಲೈನ್ ಆಗಲಿದೆ. ಈ ಎಲ್ಲಾ ವಿಷಯಗಳ ಹೆಚ್ಚಿನ ಮಾಹಿತಿಗೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು, ಆಸ್ಪತ್ರೆಯಲ್ಲಿನ ಆರೋಗ್ಯ ಮಿತ್ರರನ್ನು  ಸಂಪರ್ಕಿಸಬಹುದು ಎಂದು ವಿವರಿಸಿದರು.

ಸಾರ್ವಜನಿಕರು ಪಡೆದುಕೊಂಡ ಆರೋಗ್ಯ ಸೇವೆಯನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಎಲ್ಲರೂ ಡಿಜಿಟಲ್ ಖಾತೆ ತೆರೆಯಬೇಕು. ಡಿಜಿಟಲ್ ಆರೋಗ್ಯ ಖಾತೆಗಳನ್ನು ಈ ಖಾತೆಗೆ ಲಿಂಕ್ ಮಾಡಬಹುದಾಗಿದ್ದು, ಪ್ರತೀ ವ್ಯಕ್ತಿಯ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಚಿಕಿತ್ಸೆ ಮತ್ತು ಔಷಧೋಪಚಾರ ಎಲ್ಲದಕ್ಕೂ ವೈದ್ಯರನ್ನು ಖುದ್ದು ಕಾಣುವ ಅನಿವಾರ್ಯತೆ ಕಡಿಮೆ ಮಾಡುವ ಉದ್ದೇಶ ಇದರಿಂದ ಸಾಧ್ಯ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಗ್ರಾಮ ಒನ್‌ನ ವಾಯ್ಲೆಟ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News