ಸೆ. 23ರಂದು ನೂತನ "ಕನ್ನಡ ಭವನ" ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ

Update: 2022-09-22 14:57 GMT

ಮಂಗಳೂರು, ಸೆ.22: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡ ಸಂಘ ಬಹರೈನ್ ಇವರಿಂದ ನಿರ್ಮಿಸಲ್ಪಟ್ಟ ನೂತನ "ಕನ್ನಡ ಭವನ"ವನ್ನು ಸೆ. 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಲೋಕಾರ್ಪಣೆ ಮಾಡಲಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಹರೈನ್ ಕನ್ನಡ ಭವನ ಕಟ್ಟಡ ಸಮಿತಿಯ ಅಧ್ಯಕ್ಷ  ಆಸ್ಟಿನ್ ಸಂತೋಷ್ ಅವರು, ಅಂದು ಮುಂಜಾನೆ 9ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ವರ್ಚುವಲ್ ವೇದಿಕೆಯ ಮೂಲಕ  ನೂತನ ಕನ್ನಡ ಭವನವು ಉದ್ಘಾಟನೆಗೊಳ್ಳಲಿದೆ. ಅಪರಾಹ್ನ 5ಗಂಟೆಗೆ ಜಿನ್ಜ್ ನಲ್ಲಿರುವ ನ್ಯೂ ಮಿಲೇನಿಯಮ್ ಶಾಲೆಯ ಕಿಂಗ್ಡಮ್ ಸಭಾಂಗಣದಲ್ಲಿ  ಉದ್ಘಾಟನಾಸಮಾರಂಭ ನಡೆಯಲಿದೆ.  

ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಪೀಯೂಷ್ ಶ್ರೀವಾಸ್ತವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ  ಬಿ. ವೈ. ವಿಜಯೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಡಾ. ಮಹೇಶ್ ಜೋಶಿ,  ಪೂರ್ವಾಧ್ಯಕ್ಷ ಡಾ. ಮನು ಬಳಿಗಾರ್, ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಅನಿವಾಸಿ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ  ವಿಶ್ವೇಶ್ವರ್ ಭಟ್, ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಮುಖ್ಯ ಸಂಪಾದಕರಾದ ರವಿ ಹೆಗ್ಡೆ, ಎಂ.ಆರ್.ಜಿ. ಗ್ರೂಪ್ ಬೆಂಗಳೂರು ಇದರ ಅಧ್ಯಕ್ಷ  ಕೆ. ಪ್ರಕಾಶ್ ಶೆಟ್ಟಿ, ಬೆಂಗಳೂರಿನ ಉದ್ಯಮಿ ಆನಂದ್ ಭಟ್,  ಬೆಂಗಳೂರಿನ ಮಾಜಿ ಕೌನ್ಸಿಲರ್ ಕೆ. ಮೋಹನ್ ದೇವ್ ಆಳ್ವಾ, ಕನ್ನಡ ಪ್ರಭ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ (ಜೋಗಿ) ಹಾಗೂ ಬಹರೈನ್ ನ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಇದು ಭಾರತದ ಹೊರಗೆ ನಿರ್ಮಿಸಲಾದ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಭವನವಾಗಿದ್ದು ಸುಮಾರು ಹತ್ತು ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಕನ್ನಡ ನೂತನ ಭವನದಲ್ಲಿ ಸುಸಜ್ಜಿತ ಗ್ರಂಥಾಲಯ, ವಿಶಾಲ ಸಭಾಂಗಣ, ಕನ್ನಡ ಕಲಿಕಾ ಕೇಂದ್ರ, ಯಕ್ಷಗಾನ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಿರುವ ಕೊಠಡಿಗಳು ಮತ್ತು ವಾಣಿಜ್ಯ ಸಂಕೀರ್ಣಗಳಿವೆ. ಕರ್ನಾಟಕ ಸರಕಾರವು ಎರಡು ಕೋಟಿ ರೂ.ಯನ್ನು ಕನ್ನಡ ಭವನಕ್ಕೆ ಅನುದಾನವಾಗಿ ನೀಡಿದೆ.

ಸಂಘವು ಕರ್ನಾಟಕದ ಕರಾವಳಿಯ ಯುವಕರಿಂದ 1977ರಲ್ಲಿ ಸ್ಥಾಪನೆಗೊಂಡಿದ್ದು, ಬಹರೈನ್ ಸರಕಾರದ ಸಾಮಾಜಿಕ ಅಭಿವೃದ್ಧಿ ಸಚಿವಾಲಯದಿಂದ ನೋಂದಾವಣೆಗೊಂಡಿದೆ. ಇದು ಕಳೆದ ನಲ್ವತ್ತೈದು ವರುಷಗಳಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸೇವೆಯನ್ನು ಮಾಡುತ್ತಾ ಬಂದಿದೆ. ಗೌರವಾನ್ವಿತ ಡಾ. ಧರ್ಮಸ್ಥಳ ವೀರೇಂದ್ರ ಹೆಗ್ಡೆ, ವರನಟ ಡಾ. ರಾಜ್ ಕುಮಾರ್, ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಅರ್. ಅನಂತಮೂರ್ತಿ, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಗಡೆ,  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಾಹಿತಿ ಎಸ್.ಎಲ್. ಭೈರಪ್ಪ ಮುಂತಾದ ಗಣ್ಯರು ಕನ್ನಡ ಸಂಘವನ್ನು ಈ ಹಿಂದಿನ ವರುಷಗಳಲ್ಲಿ ಸಂದರ್ಶಿಸಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News