ಟಿ-20 ಕ್ರಿಕೆಟ್: ಪಾಕಿಸ್ತಾನ ತಂಡದ ​ನಾಯಕ ಬಾಬರ್ ಅಝಾಮ್-ರಿಝ್ವಾನ್ ಗರಿಷ್ಠ ಜತೆಯಾಟದ ವಿಶ್ವದಾಖಲೆ

Update: 2022-09-23 02:48 GMT

ಕರಾಚಿ: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಾಮ್ ಮತ್ತು ಉಪನಾಯಕ ಮೊಹಮ್ಮದ್ ರಿ‌ಝ್ವಾನ್ ಅವರು ಟಿ-20 ಕ್ರಿಕೆಟ್ ಪಂದ್ಯದಲ್ಲಿ ರನ್ ಬೆನ್ನಟ್ಟುವ ವೇಳೆ ಗರಿಷ್ಠ ಜತೆಯಾಟದ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲಂಡ್ ವಿರುದ್ಧದ ಏಳು ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ 203 ರನ್ ಸೇರಿಸುವ ಮೂಲಕ ಈ ದಾಖಲೆ ಸ್ಥಾಪಿಸಿದರು. ಗೆಲುವಿಗೆ 200 ರನ್ ಗಳಿಸಬೇಕಿದ್ದ ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೇ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.

ಬಾಬರ್ ಶತಕ ಗಳಿಸಿದರೆ ಉಪನಾಯಕ ರಿಝ್ವಾನ್ ಆಕರ್ಷಕ ಅರ್ಧಶತಕ ಗಳಿಸಿದರು. ಈ ಮೂಲಕ ಮೊದಲ ವಿಕೆಟ್‍ಗೆ ಇದ್ದ 197 ರನ್‍ಗಳ ದಾಖಲೆಯನ್ನು ಈ ಜೋಡಿ ಪುಡಿಗಟ್ಟಿದರು. ಇದು ಟಿ-20 ಕ್ರಿಕೆಟ್‍ನಲ್ಲಿ ಯಾವುದೇ ವಿಕೆಟ್‍ಗೆ ಐದನೇ ಗರಿಷ್ಠ  ಸ್ಕೋರ್ ಆಗಿದೆ. ಬಾಬರ್ 66 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರೆ, ರಿಝ್ವಾನ್ ಕೇವಲ 51 ಎಸೆತಗಳಲ್ಲಿ 88 ರನ್ ಗಳಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯರು ಇಂಗ್ಲೆಂಡ್‍ಗೆ ಶರಣಾಗಿದ್ದರು.‌

ಈ ಗೆಲುವಿನೊಂದಿಗೆ ಏಷ್ಯಾ ಕಪ್ ಫೈನಲ್ ಸೋಲಿನ ಬಳಿಕ ತಂಡದ ಸತತ ಮೂರು ಸೋಲಿನ ಸರಣಿ ಕಡಿದಂತಾಗಿದೆ. 2021ರ ಟಿ-20 ವಿಶ್ವಕಪ್‍ನಲ್ಲಿ ಪಾಕಿಸ್ತಾನವು ಭಾರತ ವಿರುದ್ಧ 10 ವಿಕೆಟ್‍ಗಳ ಜಯ ಸಾಧಿಸುವಲ್ಲೂ ಈ ಜೋಡಿ ಇಂಥದ್ದೇ ಅಮೋಘ ಪ್ರದರ್ಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News