ತನಿಖಾ ಎಜೆನ್ಸಿಗಳನ್ನು ಕೈಗೊಂಬೆಯನ್ನಾಗಿಸಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವ ಕೇಂದ್ರ ಸರ್ಕಾರ: ತಂಝೀಮ್ ಖಂಡನೆ

Update: 2022-09-23 17:05 GMT
ಸಾಂದರ್ಭಿಕ ಚಿತ್ರ

ಭಟ್ಕಳ, ಸೆ. 23: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ವಿವಿಧ ರೀತಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ದ್ವೇಷ ಸಾಧನೆ ಮಾಡುತ್ತಿದೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ಆರೋಪಿಸಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಎನ್.ಐ.ಎ., ಈ.ಡಿ. ಮತ್ತು ಪೊಲಿಸರ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಕಚೇರಿ ಮತ್ತು ನಾಯಕರ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿರುವುದು ಅತ್ಯಂತ ಖಂಡನೀಯ. ಇದು ಮುಸ್ಲಿಮರು ಮತ್ತು ದುರ್ಬಲ ವರ್ಗದ ವಿರುದ್ಧ ಸರಕಾರದ ಏಕಪಕ್ಷೀಯ ಮತ್ತು ದಬ್ಬಾಳಿಕೆಯ ಮುಂದುವರಿದ ಭಾಗವಾಗಿದೆ ಎಂದು ಶುಕ್ರವಾರ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧನೆಗಾಗಿ ತೀರ ಕೆಳಮಟ್ಟಕ್ಕೆ ಇಳಿದು, ತನ್ನ ಅಧೀನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದು ಅದರ ಪ್ರಮುಖ ನಾಯಕರನ್ನು ಬಂಧಿಸಿದೆ. ಇದು ಅತ್ಯಂತ ಖಂಡನೀಯ ಮತ್ತು ಹೇಯ ಕೃತ್ಯವಾಗಿದೆ ಎಂದು ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ತಿಳಿಸಿದ್ದು, ಗುರುವಾರ ಎನ್.ಐ.ಎ ಸಂಸ್ಥೆ ಪಿಎಫ್‍ಐ ವಿರುದ್ಧ ನಡೆಸಿದ ಕಾರ್ಯಚರಣೆಯನ್ನು ಅವರು ಖಂಡಿಸಿದ್ದಾರೆ.

ತನಿಖಾ ಸಂಸ್ಥೆಗಳು ಪೂರಕವಾದ ಮತ್ತು ಸ್ಪಷ್ಟವಾದ ಪುರಾವೆಗಳನ್ನು ಪ್ರದರ್ಶಿಸದ ಹೊರತಾಗಿ ಇಂತಹ ಸಂಘಟನೆಗಳ ತನಿಖೆಗಳು, ವಿಭಿನ್ನ ಸಂದೇಶ ರವಾನಿಸುತ್ತವೆ. ತನಿಖೆಗಳು ಪಕ್ಷಪಾತವಿಲ್ಲದ ಮತ್ತು ರಾಜಕೀಯ ಪ್ರೇರಣೆಯಿಂದ ಮುಕ್ತವಾಗಿರಬೇಕು. ದ್ವೇಷ, ಪ್ರಚೋದನೆ, ವಿದ್ವಂಸಕತೆ ಮತ್ತು ಹಿಂಸಾಚಾರದಲ್ಲಿ ಬಹಿರಂಗವಾಗಿ ತೊಡಗಿರುವ ಹಲವಾರು ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಕಾರಣ ತನಿಖಾ ಸಂಸ್ಥೆಗಳ ಈ ನಡೆ ಪ್ರಶ್ನಾರ್ಹವಾಗುತ್ತದೆ. ಆದ್ದರಿಂದ, ಈ ದಾಳಿಗಳು ಸಮಾಜಕ್ಕೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜನರು, ಪ್ರತಿಪಕ್ಷಗಳು, ಅಲ್ಪಸಂಖ್ಯಾತರು ಅಥವಾ ಸಮಾಜದ ಯಾವುದೇ ಸಾಮಾಜಿಕ ವರ್ಗಕ್ಕೆ ಸೇರಿದವರಾಗಿದ್ದರೂ ಅನ್ಯಾಯದ ರೀತಿಯಲ್ಲಿ ಕಿರುಕುಳಕ್ಕೆ ಒಳಪಡಿಸುವ ಸರ್ವ ಕಾರ್ಯಾಚರಣೆ ದಾಳಿಗಳು ಮತ್ತು ಕ್ರಮಗಳನ್ನು ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ಸಂಸ್ಥೆ ಬಲವಾಗಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ಯಾವುದೇ ಅಭಿವೃದ್ಧಿಯನ್ನು ಮಾಡದ ಕೇಂದ್ರ ಬಿಜೆಪಿ ಸರ್ಕಾರ ಮುಂಬರುವ ಚುನಾವಣಾ ತಂತ್ರದ ಭಾಗವಾಗಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ರಾಜಕೀಯ ದುರ್ಲಾಭ ಪಡೆಯ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳನ್ನು ನಿಷೇಧಿಸುವ, ಅದರ ಕಚೇರಿಗಳ ಮೇಲೆ ದಾಳಿ ಮಾಡುವ, ಸಂಘಟನೆಯ ಪ್ರಮುಖರನ್ನು ಬಂಧಿಸುವ ಮೂಲಕ ಹಿಂದುತ್ವ ಗುಂಪುಗಳಿಗೆ ತೃಪ್ತಿಪಡಿಸಲು ಹೊರಟಂತೆ ಕಾಣುತ್ತಿದೆ. ಜನರ ಭಾವನೆಗಳನ್ನು ಕೆರಳಿಸುವುದರ ಮೂಲಕ ಮುಂದಿನ ಅವಧಿಗೆ ಅಧಿಕಾರ ಪಡೆಯುವ ನಿಮ್ಮ ಪ್ರಯತ್ನ ಫಲಿಸದು ಎಂದಿರುವ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಸರಕಾರವು ಪ್ರತೀ ಹಂತದಲ್ಲೂ ನ್ಯಾಯ ಪಾಲನೆಯನ್ನು ಮಾಡುವಂತೆ ನಾವು ಒತ್ತಾಯಿಸುತ್ತೇವೆ. ಅಪರಾಧ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಬೇಕು, ಬಂಧಿತರನ್ನು ತಕ್ಷಣವೇ ಬಿಡುಗಡೆಗೊಳಿಸಿ, ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ದ್ವೇಷದ ವಾತಾವರಣ ಅಂತ್ಯಗೊಳ್ಳಬೇಕು. ಎಲ್ಲಾ ವಿಧದ ಕೋಮುವಾದ ಮತ್ತು ಅನ್ಯಾಯ - ದಬ್ಬಾಳಿಕೆ ವಿರುದ್ಧ ನ್ಯಾಯಪ್ರಿಯ ಜನತೆ ಒಗ್ಗಟ್ಟಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News