10,000ಕ್ಕೂ ಅಧಿಕ ವೃಕ್ಷಗಳ ಸಂರಕ್ಷಿಸಿದ ಬಾಂಗ್ಲಾದ ಪರಿಸರ ಕಾರ್ಯಕರ್ತ

Update: 2022-09-24 18:38 GMT
PHOTO: TWITTER

 ಹೊಸದಿಲ್ಲಿ, ಸೆ.24: ಮರಗಳ ಕಾಂಡಗಳಿಗೆ ಹೊಡೆದಿರುವ ಮೊಳೆಯನ್ನು ಹೊರತೆಗೆದು ವೃಕ್ಷಗಳ ಸಂರಕ್ಷಣೆ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಬಾಂಗ್ಲಾದೇಶದ ಪರಿಸರ ಕಾರ್ಯಕರ್ತ ವಾಹಿದ್ ಸರ್ದರ್, ಕಳೆದ 4 ವರ್ಷಗಳಿಂದ 10,000ಕ್ಕೂ ಅಧಿಕ ಮರಗಳನ್ನು ಸಂರಕ್ಷಿಸಿದ್ದಾರೆ.

 ಜಾಹೀರಾತುಗಳು, ರಾಜಕೀಯ ಪಕ್ಷಗಳ ಬ್ಯಾನರ್‌ಗಳು, ಸೈನ್ ಬೋರ್ಡ್‌ಗಳನ್ನು ಮೊಳೆ ಹೊಡೆದು ಮರಕ್ಕೆ ಅಂಟಿಸಲಾಗುತ್ತದೆ. ಮರಗಳು ನನ್ನ ಮಕ್ಕಳಿದ್ದಂತೆ ಎನ್ನುವ ಇವರು, ಮರಕ್ಕೆ ಮೊಳೆ ಹೊಡೆದಿರುವುದನ್ನು ಕಂಡಾಗ ನನ್ನ ಹೃದಯಕ್ಕೆ ನೋವಾಗುತ್ತದೆ. ಆಗ ಮರದಿಂದ ಒಸರುವ ದ್ರವವು ಮರದ ರಕ್ತವಾಗಿದೆ. ಮೊಳೆ ಹೊಡೆದಾಗ ಮರ ಗಾಯಗೊಳ್ಳುತ್ತದೆ ಮತ್ತು ಅದರ ರಕ್ತಕ್ಕೆ ಸೋಂಕು ತಗುಲಿ ನಿಧಾನವಾಗಿ ಮರ ಸಾಯತೊಡಗುತ್ತದೆ ಎಂದವರು ಹೇಳುತ್ತಾರೆ. ಮೇಸ್ತ್ರಿ ಕೆಲಸ ಮಾಡುವ ಸರ್ದರ್, ಈ ಮಾದರಿ ಕಾರ್ಯಕ್ಕೆ ತನ್ನ ತವರು ಜಿಲ್ಲೆ ಜಶೋರ್‌ನಲ್ಲಿ ಚಾಲನೆ ನೀಡಿದ್ದು ಬಳಿಕ ಇದನ್ನು ಝೆನಾಯ್ದ, ಖುಲ್ನಾ ಹಾಗೂ ಇತರ ಪ್ರದೇಶಗಳಿಗೂ ವಿಸ್ತರಿಸಿದ್ದಾರೆ. ಬಾಂಗ್ಲಾದೇಶದ ‘ಗೀಚುಬರಹ ಮತ್ತು ಪೋಸ್ಟರ್ ಅಂಟಿಸುವುದನ್ನು ನಿಯಂತ್ರಿಸುವ ಕಾಯ್ದೆ 2012’ರ ಬಗ್ಗೆ ದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವುದು ತನ್ನ ಉದ್ದೇಶವಾಗಿದೆ ಎಂದವರು ಹೇಳಿದ್ದಾರೆ. ವೃಕ್ಷಗಳ ಸಂರಕ್ಷಣೆ ಜತೆ 2006ರಿಂದ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲೂ ಇವರು ತೊಡಗಿದ್ದು ಇದುವರೆಗೆ ಸುಮಾರು 20,000ದಷ್ಟು ಹಣ್ಣು ಹಾಗೂ ಔಷಧಗಳ ಗಿಡಗಳನ್ನು ತನ್ನ ಹುಟ್ಟೂರು ಜಷೋರ್‌ನಲ್ಲಿ ನೆಟ್ಟು ಬೆಳೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News