ಉತ್ತರಾಖಂಡ ಯುವತಿಯ ಹತ್ಯೆ ಪ್ರಕರಣ: ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಅಂತ್ಯಕ್ರಿಯೆಗೆ ನಿರಾಕರಿಸಿದ ಕುಟುಂಬ

Update: 2022-09-25 05:30 GMT
ರಾಜ್ಯ ಸರಕಾರದ ಆದೇಶದ ಮೇರೆಗೆ ರೆಸಾರ್ಟ್ ನೆಲಸಮಗೊಂಡಿರುವುದು Photo:NDTV

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹತ್ಯೆಗೀಡಾದ 19 ವರ್ಷದ ಯುವತಿಯ ಕುಟುಂಬ ಸದಸ್ಯರು ಯುವತಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು ನಿರಾಕರಿಸಿದ್ದಾರೆ ಹಾಗೂ  ಪ್ರಕರಣದಲ್ಲಿ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಯುವತಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ರೆಸಾರ್ಟ್ಅನ್ನು ತರಾತುರಿಯಲ್ಲಿ ನೆಲಸಮ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿರುವ ಯುವತಿಯ ಕುಟುಂಬ ಸದಸ್ಯರು, ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪುತ್ರ ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತೊಮ್ಮೆ ಮರಣೋತ್ತರ ಪರೀಕ್ಷೆಯನ್ನು ಮಾಡುವಂತೆಯೂ ಕುಟುಂಬದವರು ಒತ್ತಾಯಿಸಿದ್ದಾರೆ. ಯುವತಿ ಕಾಲುವೆಯ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಹಾಗೂ ದೇಹದಲ್ಲಿ  ಮೊಂಡಾದ ವಸ್ತುವಿನಿಂದ  ಉಂಟಾದ ಗಾಯದ ಲಕ್ಷಣಗಳು ಕಂಡುಬಂದಿದೆ ಎಂದು ತಾತ್ಕಾಲಿಕ ವರದಿ ಹೇಳಿದೆ.

ಋಷಿಕೇಶದ ಏಮ್ಸ್‌ನಲ್ಲಿ ತಂಡವೊಂದು ಶವಪರೀಕ್ಷೆ ನಡೆಸಿದೆ. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬವನ್ನು ಮನವೊಲಿಸಲು ಅಧಿಕಾರಿಗಳು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ನಡೆದ ರೆಸಾರ್ಟ್ ಧ್ವಂಸ ಕುರಿತು ಪ್ರತಿಪಕ್ಷವೂ ಪ್ರಶ್ನೆಗಳನ್ನು ಎತ್ತಿದೆ. "ಇದೊಂದು ಯೋಜಿತ ಕೊಲೆಯಾಗಿದೆ. ಸಾಕ್ಷ್ಯ ನಾಶಪಡಿಸಲು ಈ ನೆಲಸಮವನ್ನು ನಡೆಸಲಾಗಿದೆ ಎಂದು ಜನರು ಶಂಕಿಸಿದ್ದಾರೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ  ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ NDTVಗೆ ತಿಳಿಸಿದ್ದಾರೆ.

ತನ್ನನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನವನ್ನು ವಿರೋಧಿಸಿದ್ದಕ್ಕಾಗಿ  19 ವರ್ಷದ ಯುವತಿಯನ್ನು ಹೋಟೆಲ್ ಮಾಲಿಕ, ಬಿಜೆಪಿ ನಾಯಕ ವಿನೋದ್ ಆರ್ಯನ  ಮಗ ಪುಲ್ಕಿತ್ ಆರ್ಯ ಹಾಗೂ ಇತರ ಇಬ್ಬರು,  ಯುವತಿಯನ್ನು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ. ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಶನಿವಾರ ಕಾಲುವೆಯಲ್ಲಿ ಪತ್ತೆಯಾಗಿದೆ.

ರಾಜ್ಯದಲ್ಲಿ ತೀವ್ರ ಪ್ರತಿಭಟನೆಯ ಬಳಿಕ ಪುಲ್ಕಿತ್ ಆರ್ಯ ಹಾಗೂ ಇತರ ಇಬ್ಬರನ್ನು ಹತ್ಯೆ ಆರೋಪದಲ್ಲಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News