ಆರೋಗ್ಯವಂತ ಶಿಕ್ಷಕರು ಆರೋಗ್ಯ ಸಮಾಜದ ಆಧಾರ ಸ್ಥಂಭವಾಗಿದ್ದಾರೆ: ಮೌಲಾನ ಝುಬೈರ್

Update: 2022-09-25 12:09 GMT

ಭಟ್ಕಳ: ಶಿಕ್ಷಕರ ಎಲ್ಲ ರೀತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸರಿಯಾಗಿದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿಕ್ಕೆ ಸಾಧ್ಯವಾಗಿದ್ದು ಆರೋಗ್ಯವಂತ ಶಿಕ್ಷಕರು ಆರೋಗ್ಯಯುತ ಸಮಾಜದ ಆಧಾರ ಸ್ಥಂಭವಾಗಿದ್ದಾರೆ ಎಂದು ದಾವತ್ ಸೆಂಟರ್ ನ ಕಾರ್ಯದರ್ಶಿ ಮೌಲಾನ ಸೈಯದ್ ಝುಬೈರ್ ಹೇಳಿದರು. 

ಅವರು ರವಿವಾರ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಹಾಗೂ ಭಟ್ಕಳದ ವೆಲ್ಫೇರ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಕ್ಷಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ, ರಾಜ್ಯದಲ್ಲಿ ಶಿಕ್ಷಕ ಆರೋಗ್ಯ ಕುರಿತಂತೆ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ನಡೆಸಿದ ವರದಿಯೂ ಶಿಕ್ಷಕ ಸಮುದಾಯವನ್ನು ಚಿಂತಿತರನ್ನಾಗಿ ಮಾಡಿದೆ. ರಾಜ್ಯದ ಶೇ.60ಕ್ಕೂ ಹೆಚ್ಚು ಶಿಕ್ಷಕರು ಬಿಪಿ, ಶುಗರ್, ಕಡ್ನಿ, ಕ್ಯಾನ್ಸರ್ ನಂತಹ ಮಾರಕ ರೋಗದಿಂದ ಬಳುತ್ತಿದ್ದಾರೆ. ಅವರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರಭಾವ ಬೀಳಲಿದೆ. ಐಟಾ ಸೆ.16 ರಿಂದ 25 ರವರೆಗೆ ಹೆಲ್ದಿ ಟೀಚರ್ ಹೆಲ್ದಿ ಎಜುಕೇಶನ್ ಎಂಬ ಘೋಷಣೆಯೊಂದಿಗೆ ಶಿಕ್ಷಕರ ಆರೋಗ್ಯ ಜಾಗೃತಿ ಅಭಿಯಾನ ನಡೆಸುವುದರ ಮೂಲಕ ಶಿಕ್ಷಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ ಎಂದ ಅವರು ಸರ್ಕಾರ ಶಿಕ್ಷಕರನ್ನು ಅನ್ಯ ಕೆಲಸಕ್ಕೆ ನಿಯೋಜಿಸದೆ ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಒತ್ತಡ ಕಡಿಮೆಯಾಗಲು ಸಾಧ್ಯ ಇದಕ್ಕಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ನ್ಯೂ ಶಮ್ಸ್ ಸ್ಕೂಲ್ ಪ್ರಾಂಶುಪಾಲ ಲಿಯಾಕತ್ ಅಲಿ, ಜಮಾಅತೆ ಇಸ್ಲಾಮೀ ಹಿಂದ್ ಪ್ರಭಾರ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಮಾತನಾಡಿದರು. ಐಟಾ ಉ.ಕ.ಜಿಲ್ಲಾಧ್ಯಕ್ಷ ಅಲಿ ಮನೆಗಾರ್ ವಂದಿಸಿದರು.

ನವಾಯತ್ ಕಾಲನಿ ಸಿ.ಆರ್.ಪಿ ಮುನಿರಾ ಖಾನಂ, ವೆಲ್ಫೇರ್ ಆಸ್ಪತ್ರೆಯ ಅಬುಲ್ ಆಲಾ, ಡಾ.ಶಕಿಯಾ, ಡಾ.ಅಂಜುಮ್, ಗಾಲಿಬ್ ಔಟಿ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News