ಗುಜರಾತ್: ಗೋ ಆಶ್ರಮಗಳಿಗೆ ಸರಕಾರ ನೆರವು ನೀಡಿಲ್ಲ ಎಂದು ಸಾವಿರಾರು ಹಸುಗಳನ್ನು ರಸ್ತೆಗೆ ಬಿಟ್ಟ ಆಶ್ರಮ ಟ್ರಸ್ಟಿಗಳು

Update: 2022-09-25 14:55 GMT
Photo: Twitter/@SevadalNuh

ಪಾಲನ್‌ಪುರ: ಗುಜರಾತ್(Gujarat) ಸರಕಾರ ಗೋ ಆಶ್ರಮಗಳ (cow shelter) ನಿರ್ವಹಣೆಗೆ 500 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿಲ್ಲ ಎಂದು 200 ಕ್ಕೂ ಹೆಚ್ಚು ಗೋ ಆಶ್ರಮಗಳ ಟ್ರಸ್ಟಿಗಳು ಸಾವಿರಾರು ಹಸುಗಳನ್ನು ರಸ್ತೆಗೆ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಉತ್ತರ ಗುಜರಾತ್ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಟ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು ಎಂದು freepressjournal.com ವರದಿ ಮಾಡಿದೆ.

2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಭರವಸೆ ನೀಡಿದಂತೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಟ್ರಸ್ಟಿಗಳು ಧರಣಿ ನಡೆಸುತ್ತಿದ್ದಾರೆ ಎಂದು ಬನಸ್ಕಾಂತ ಪಂಜ್ರಪೋಲ್ಸ್ (ಗೋ ಆಶ್ರಮ) ಟ್ರಸ್ಟಿ ಕಿಶೋರ್ ದವೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಮ್ಮ ಮನವಿಗಳಿಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಬೇಸತ್ತ ಗೋಆಶ್ರಮ ಟ್ರಸ್ಟಿಗಳು ಗುರುವಾರ ಉತ್ತರ ಗುಜರಾತ್‌ನ ಸರ್ಕಾರಿ ಆವರಣದ ಸಮೀಪ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ಹಸುಗಳನ್ನು ರಸ್ತೆಗೆ ಬಿಟ್ಟಿದ್ದಾರೆ. 

ರಾಜ್ಯದಲ್ಲಿ 1,500 ಪಂಜರಪೋಲೆಗಳು ಸುಮಾರು 4.5 ಲಕ್ಷ ಹಸುಗಳಿಗೆ ಆಶ್ರಯ ನೀಡುತ್ತಿವೆ, ಬನಸ್ಕಾಂತದಲ್ಲಿ 170 ಪಂಜರಪೋಲೆ ಆಶ್ರಮದಲ್ಲಿ 80,000 ಹಸುಗಳಿಗೆ ಆಶ್ರಯ ನೀಡಲಾಗುತ್ತಿದೆ.

ಪಂಜರಪೋಲೆ ಟ್ರಸ್ಟ್ ಒಂದು ಜಾನುವಾರುಗಳಿಗೆ ಆಹಾರಕ್ಕಾಗಿ ದಿನಕ್ಕೆ 60 ರಿಂದ 70 ರೂ. ಖರ್ಚು ಮಾಡುತ್ತದೆ. ಕೋವಿಡ್ ನಂತರ, ಪಂಜ್ರಪೋಲೆ ಟ್ರಸ್ಟ್‌ಗಳಿಗೆ ದೇಣಿಗೆ ಬರಿದಾಗಿದ್ದು, ಹಣವಿಲ್ಲದೆ ಆಶ್ರಯ ಮನೆಗಳನ್ನು ನಡೆಸುವುದು ಕಷ್ಟಕರವಾಗುತ್ತಿದೆ. ಸರಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಟ್ರಸ್ಟಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News