ತೈವಾನ್ ವಿಷಯದಲ್ಲಿ ಬಾಹ್ಯ ಹಸ್ತಕ್ಷೇಪ ಸಹಿಸುವುದಿಲ್ಲ: ವಿಶ್ವಸಂಸ್ಥೆಯಲ್ಲಿ ಚೀನಾ ಎಚ್ಚರಿಕೆ

Update: 2022-09-25 16:41 GMT

ನ್ಯೂಯಾರ್ಕ್, ಸೆ.25: ತೈವಾನ್ ಮೇಲಿನ ಹಕ್ಕು ಪ್ರತಿಪಾದನೆಯ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಒತ್ತಿಹೇಳಿರುವ ಚೀನಾ, ತೈವಾನ್ ಅನ್ನು ಮರುಸೇರ್ಪಡೆಗೊಳಿಸುವ ತನ್ನ ಸಂಕಲ್ಪಕ್ಕೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವೂ ‘ಇತಿಹಾಸದ ಚಕ್ರಗಳಡಿ’ ಸಿಲುಕಿ ಪುಡಿಯಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಚೀನಾವು ಸಂಪೂರ್ಣ ಮರುಏಕೀಕರಣವಾದರೆ ಮಾತ್ರ ತೈವಾನ್ ಜಲಸಂಧಿಯಾದ್ಯಂತ ನೈಜ ಶಾಂತಿ ನೆಲೆಸಲಿದೆ. ತೈವಾನ್ ವಿಷಯದಲ್ಲಿ ಬಾಹ್ಯ ಹಸ್ತಕ್ಷೇಪವನ್ನು ವಿರೋಧಿಸಲು ಅತ್ಯಂತ ಬಲವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಪಿಆರ್‌ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಸರಕಾರ ಎಲ್ಲಾ ಚೀನೀಯರನ್ನೂ ಪ್ರತಿನಿಧಿಸುವ ಏಕೈಕ ಸರಕಾರವಾಗಿದೆ . ಒಂದು ಚೀನಾ ತತ್ವವು ಅಂತರಾಷ್ಟ್ರೀಯ ಸಂಬಂಧಗಳಲ್ಲಿ ರೂಢಿಯಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಚೀನಾ ಬಳಸಿರುವ ಉಗ್ರಭಾಷೆ ತೈವಾನ್ ವಿಷಯದಲ್ಲಿ ಚೀನಾದ ವಿಶಿಷ್ಟ ತೀಕ್ಷ್ಣತೆಯನ್ನು ಸೂಚಿಸುತ್ತದೆ. ಆದರೆ ಪ್ರಮುಖ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ಪ್ರತಿಪಾದನೆ ಹೆಚ್ಚಾಗಿ ಗಮನ ಸೆಳೆಯುವುದಿಲ್ಲ. ಪ್ರಸ್ತುತ ವಿಶ್ವಸಂಸ್ಥೆ ಅಧಿವೇಶನದಲ್ಲಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಬದಲು ವಿದೇಶಾಂಗ ಸಚಿವ ವಾಂಗ್ ಯಿ ಪಾಲ್ಗೊಂಡು ಮಾಡಿದ ಭಾಷಣವೂ ಹೆಚ್ಚಿನ ಗಮನ ಸೆಳೆಯುವುದಿಲ್ಲ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

‘ಪ್ರಸ್ತುತ ಚೀನಾ-ಅಮೆರಿಕ ಸಂಬಂಧಗಳು ಗಂಭೀರ ಪರಿಣಾಮಗಳನ್ನು ಎದುರಿಸುತ್ತಿವೆ ಮತ್ತು ಇದರಿಂದ ಅಮೆರಿಕ ಬಹಳಷ್ಟು ವಿಷಯಗಳನ್ನು ಕಲಿಯುವ ಅಗತ್ಯವಿದೆ ಎಂದು ವಾಂಗ್ ಅಮೆರಿಕದ ವಿದೇಶಾಂಗ ಸಚಿವರಿಗೆ ಸ್ಪಷ್ಟಪಡಿಸಿದರು. ತೈವಾನ್ ವಿಷಯದಲ್ಲಿ ಅಮೆರಿಕದ ಇತ್ತೀಚಿನ ತಪ್ಪು ಕೃತ್ಯಗಳ ಬಗ್ಗೆ ಉಭಯ ಮುಖಂಡರು ಚರ್ಚಿಸಿದರು. ಸಭೆಯು ಪ್ರಾಮಾಣಿಕ, ರಚನಾತ್ಮಕ ಮತ್ತು ಮಹತ್ವದ್ದಾಗಿದೆ ಎಂದು ಎರಡೂ ಕಡೆಯವರು ವಿಶ್ವಾಸವಿರಿಸಿ ಸಂವಹನವನ್ನು ಮುಂದುವರಿಸಲು ಒಪ್ಪಿಕೊಂಡರು’ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಸಚಿವಾಲಯ ‘ತೈವಾನ್ ವಿರುದ್ಧದ ಪ್ರಚೋದನಕಾರಿ ಕ್ರಮಗಳನ್ನು ಕೊನೆಗೊಳಿಸಲು ಚೀನಾವನ್ನು ಒತ್ತಾಯಿಸುವ ಬೈಡನ್ ಆಡಳಿತದ ನಿಲುವನ್ನು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪುನರುಚ್ಚರಿಸಿದರು’ ಎಂದಿದೆ. 1949ರ ಅಂತರ್ಯುದ್ಧದ ಬಳಿಕ ಮೈನ್‌ಲ್ಯಾಂಡ್ ಚೀನಾದಿಂದ ಪ್ರತ್ಯೇಕಗೊಂಡು ಸ್ವಯಂ ಆಡಳಿತದ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ದೇಶವಾಗಿರುವ ತೈವಾನ್ ಮೇಲೆ ಚೀನಾ ನಿರಂತರ ಹಕ್ಕು ಸಾಧಿಸುತ್ತಾ ಬರುತ್ತಿದೆ. ಜಾಗತಿಕ ವೇದಿಕೆಯಲ್ಲಿ ತೈವಾನ್‌ಗೆ ರಾಷ್ಟ್ರೀಯ ಸ್ಥಾನಮಾನ ಕಲ್ಪಿಸುವ ಯಾವುದೇ ಪ್ರಯತ್ನವನ್ನು ಉಗ್ರವಾಗಿ ವಿರೋಧಿಸುತ್ತಿದೆ. ತೈವಾನ್‌ಗೆ ಜಾಗತಿಕ ಮುಖಂಡರ ಭೇಟಿಗೆ ತೀವ್ರ ಆಕ್ಷೇಪ ಎತ್ತುತ್ತಿದೆ. ಆದರೂ, ಕಳೆದ ತಿಂಗಳು ಅಮೆರಿಕ ಸಂಸತ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಬಳಿಕ ಅಮೆರಿಕ-ಚೀನಾ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News