ಇರಾನ್ ವಶಪಡಿಸಿಕೊಂಡ ದ್ವೀಪಗಳನ್ನು ಹಿಂದಿರುಗಿಸಲು ಯುಎಇ ಆಗ್ರಹ

Update: 2022-09-25 18:23 GMT
PHOTO SOURCE: TWITTER/@Journal_UN_ONU

ನ್ಯೂಯಾರ್ಕ್, ಸೆ.25: ಕಳೆದ 5 ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ 3 ದ್ವೀಪಗಳನ್ನು ಹಿಂದಿರುಗಿಸುವಂತೆ ಯುಎಇ ಶನಿವಾರ ಇರಾನ್ ಅನ್ನು ಆಗ್ರಹಿಸಿದೆ.

ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ 77ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಯುಎಇಯ ಅಂತರಾಷ್ಟ್ರೀಯ ಸಹಕಾರ ಇಲಾಖೆಯ ಸಹಾಯಕ ಸಚಿವ ರೀಮ್ ಅಲ್ ಹಶಿಮಿ, ಮೂರು ದ್ವೀಪಗಳನ್ನು ಇರಾನ್ ವಶಪಡಿಸಿಕೊಂಡಿರುವುದು ಸಾರ್ವಭೌಮತೆಯ ಉಲ್ಲಂಘನೆಯಾಗಿದೆ. ಯುಎಇಯ ಮೂರು ದ್ವೀಪಗಳಾದ ಗ್ರೇಟರ್ ತನಬ್, ಲೆಸರ್ ತನಬ್ ಮತ್ತು ಅಬು ಮುಸಾಗಳ ಮೇಲಿನ ಇರಾನ್‌ನ ಆಕ್ರಮಣವನ್ನು ಕೊನೆಗೊಳಿಸುವ ನಮ್ಮ ಬೇಡಿಕೆಯನ್ನು ಪುನರುಚ್ಚರಿಸುತ್ತೇವೆ ಎಂದರು.

ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ನಡುವಿನ ಹಾರ್ಮುಜ್ ಜಲಸಂಧಿಯಲ್ಲಿರುವ ಈ ದ್ವೀಪಗಳಿಂದ 1971ರಲ್ಲಿ ಬ್ರಿಟಿಷ್ ಪಡೆ ಹಿಂದೆ ಸರಿದ ಬಳಿಕ ಇರಾನ್ ಈ ಮೂರು ದ್ವೀಪಗಳನ್ನು ವಶಕ್ಕೆ ಪಡೆದಿತ್ತು.

ರವಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಯುಇಎ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭ ಶೇಖ್ ಅಬ್ದುಲ್ಲಾ ಅವರು ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಕರೆ ನೀಡಿದರು ಎಂದು ಎಮಿರೇಟ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News