ಲಿಂಗಾನುಪಾತ: ಉತ್ತರಾಖಂಡ ಕನಿಷ್ಠ; ಗರಿಷ್ಠ ಯಾವ ರಾಜ್ಯ ಗೊತ್ತೇ ?

Update: 2022-09-26 01:52 GMT
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಜನನ ದರದಲ್ಲಿ ಲಿಂಗಾನುಪಾತ ಉತ್ತರಾಖಂಡದಲ್ಲಿ ಕನಿಷ್ಠವಾಗಿದ್ದು, 1000 ಗಂಡುಮಕ್ಕಳು ಹುಟ್ಟುವ ವೇಳೆ ಕೇವಲ 844 ಹೆಣ್ಣುಮಕ್ಕಳು ಹುಟ್ಟುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿ ಅಂಶ ಬಹಿರಂಗಗೊಂಡಿದೆ. ಕೇರಳದಲ್ಲಿ ಲಿಂಗಾನುಪಾತ ಗರಿಷ್ಠ ಅಂದರೆ 974ರಷ್ಟಿದೆ ಎಂದು ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂನ 2020ರ ವರದಿ ಹೇಳಿದೆ.

ಭಾರತದ ರಿಜಿಸ್ಟ್ರಾರ್ ಜನರಲ್ (RGI) ಈ ವರದಿ ಬಿಡುಗಡೆ ಮಾಡಿದ್ದು, ದೇಶದ ಒಟ್ಟಾರೆ ಲಿಂಗಾನುಪಾತ ಪ್ರಮಾಣ 2017-19ರ ಅವಧಿಯಲ್ಲಿ ಇದ್ದ 904ರಿಂದ ಮೂರು ಅಂಕಗಳಷ್ಟು ಹೆಚ್ಚಿ 907ಕ್ಕೇರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾನುಪಾತ 907 ಇದ್ದರೆ ನಗರ ಪ್ರದೇಶಗಳಲ್ಲಿ 910ರಷ್ಟಿದೆ.

ಈ ಲಿಂಗಾನುಪಾತ ಬಗೆಗಿನ ಅಂಕಿ ಅಂಶಗಳು ಪ್ರಸವಪೂರ್ವ ಲಿಂಗ ನಿರ್ಧರಣೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಸೂಚಕ ಎನ್ನಲಾಗಿದೆ. 2017-19ರ ಅವಧಿಯಲ್ಲಿ ಉತ್ತರಾಖಂಡದಲ್ಲಿ  848ರಷ್ಟಿದ್ದ ಲಿಂಗಾನುಪಾತ ನಾಲ್ಕು ಅಂಕಗಳಷ್ಟು ಕಡಿಮೆಯಾಗಿದೆ.

"ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾನುಪಾತ ಕೇರಳದಲ್ಲಿ ಗರಿಷ್ಠ (973 ಮತ್ತು ಉತ್ತರಾಖಂಡದಲ್ಲಿ ಕನಿಷ್ಠ (853) ಇದೆ. ಅಂತೆಯೇ ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಕ್ರಮವಾಗಿ ಕೇರಳದಲ್ಲಿ 975 ಮತ್ತು ಉತ್ತರಾಖಂಡದಲ್ಲಿ 821 ಆಗಿದೆ. 2014-16ರ ಅವಧಿಯಲ್ಲಿ ಈ ಬೆಟ್ಟ ರಾಜ್ಯದಲ್ಲಿ ಲಿಂಗಾನುಪಾತ 850 ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೆಹಲಿ (860), ಹರ್ಯಾಣ (870), ಮಹಾರಾಷ್ಟ್ರ (876), ಗುಜರಾತ್ (877) ಮತ್ತು ತೆಲಂಗಾಣದಲ್ಲಿ ಲಿಂಗಾನುಪಾತ 892 ಇದೆ. ಹೆಣ್ಣು ಭ್ರೂಣಹತ್ಯೆ ಪ್ರಕರಣಗಳಿಗೆ ಕುಖ್ಯಾತವಾದ ಹರ್ಯಾಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾನುಪಾತ 868 ಹಾಗೂ ನಗರ ಪ್ರದೇಶಗಲ್ಲಿ 874ರಷ್ಟಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News