ರಾಜಸ್ಥಾನ ಕಾಂಗ್ರೆಸ್‌ ನಲ್ಲಿ ಮುಂದುವರಿದ ಬಿಕ್ಕಟ್ಟು: ಹೈಕಮಾಂಡ್ ಸಂಪರ್ಕಕ್ಕೆ ಸಿಗದ ಗೆಹ್ಲೋಟ್‌ ಬಣದ ಶಾಸಕರು

Update: 2022-09-26 06:12 GMT
Photo: PTI

ಜೈಪುರ: ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಕುರಿತು ರಾಜಸ್ಥಾನ(Rajasthan)ದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಅವರ ನಿಷ್ಠ ಶಾಸಕರು ಕಾಂಗ್ರೆಸ್(Congress) ಕೇಂದ್ರ ನಾಯಕರ ಸಭೆಗೆ ಗೈರಾಗಿದ್ದು, ಕಾಂಗ್ರೆಸ್‌ ದಿಲ್ಲಿ ನಾಯಕತ್ವಕ್ಕೆ ರಾಜಸ್ಥಾನ ಕಾಂಗ್ರೆಸ್‌ ಹಿಡಿತ ತಪ್ಪಿದಂತಾಗಿದೆ.

ಗೆಹ್ಲೋಟ್‌ಗೆ ನಿಷ್ಠರಾಗಿರುವ 90 ಶಾಸಕರು ಸಚಿನ್ ಪೈಲಟ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ ನಂತರ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಹಿರಿಯ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಜೈಪುರ ತಲುಪಿದ್ದರು. ಬಿಕ್ಕಟ್ಟಿನಿಂದ ಪಕ್ಷವನ್ನು ಉಳಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲು ಅವರು ಶಾಸಕರನ್ನು ಭೇಟಿಯಾಗಬೇಕಿತ್ತು.

ಆದರೆ, ಶಾಸಕರು ದಿಲ್ಲಿ ನಾಯಕರ ಸಂಪರ್ಕಕ್ಕೆ ಅಲಭ್ಯರಾಗಿದ್ದಾರೆ. 'ಕೇಂದ್ರ ನಾಯಕರನ್ನು ಭೇಟಿ ಮಾಡಲು ಶಾಸಕರು ಮುಕ್ತರಾಗಿದ್ದಾರೆ, ಆದರೆ ಇಂದಿನಿಂದ ನವರಾತ್ರಿ ಆರಂಭವಾಗಿದ್ದು ಶಾಸಕರು ಮನೆಗೆ ತೆರಳಬೇಕಾಗಿದೆʼ ಎಂದು ಹಿರಿಯ ಶಾಸಕ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.

ಶಾಸಕರ ಭೇಟಿ ಸಾಧ್ಯವಾಗದೆ ಖರ್ಗೆ ಮತ್ತು ಮಾಕನ್ ದಿಲ್ಲಿಗೆ ಮರಳುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೆಹ್ಲೋಟ್ ಗೆದ್ದರೆ, ಈ ಹಿಂದೆ ಸಿಎಂ ಸ್ಥಾನಕ್ಕಾಗಿ ಬಂಡಾಯ ಎದ್ದಿದ್ದ ಪೈಲಟ್ ರನ್ನು ಮುಖ್ಯಮಂತ್ರಿ ಹುದ್ದೆಗೆ ಹೈಕಮಾಂಡ್ ಆಯ್ಕೆ ಮಾಡಲಿದೆ ಎನ್ನಲಾಗಿದೆ. ಶಶಿ ತರೂರ್ ಮತ್ತು ಮನೀಶ್ ತಿವಾರಿಯಂತಹ ಪ್ರಮುಖ ನಾಯಕರು ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತರಾದರೂ, ರಾಜಸ್ಥಾನದ ಮುಖ್ಯಮಂತ್ರಿ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.

ಈ ವರ್ಷ ಉದಯಪುರದಲ್ಲಿ ನಡೆದ ಪಕ್ಷದ ಉನ್ನತ ಸಭೆಯಲ್ಲಿ ನಿರ್ಧರಿಸಿದಂತೆ ಪಕ್ಷವು "ಒಬ್ಬ ವ್ಯಕ್ತಿ ಒಂದು ಹುದ್ದೆ" ನಿಯಮಕ್ಕೆ ಅಂಟಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಿ ಹೇಳಿದ್ದರು.

ನಿನ್ನೆಯ ಬೆಳವಣಿಗೆಗಳ ನಡುವೆ, 'ಶಾಸಕರು ಕೋಪಗೊಂಡಿದ್ದಾರೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಪೈಲಟ್ ಅವರನ್ನು ಬೆಂಬಲಿಸಲು ಸಿದ್ಧರಿಲ್ಲದ ಕಾರಣ ಈ ವಿಷಯವು ತನ್ನ ಕೈಯಲ್ಲಿಲ್ಲʼ ಎಂದು ಗೆಹ್ಲೋಟ್ ಕಾಂಗ್ರೆಸ್‌ ಹೈಕಮಾಂಡಿಗೆ ಹೇಳಿದ್ದಾರೆಂದು ವರದಿಯಾಗಿತ್ತು.

ಜೈಪುರದಲ್ಲಿ ನಿನ್ನೆ ಸಂಜೆಯಿಂದ ನಾಟಕೀಯ ಬೆಳವಣಿಗೆಗಳು ಪ್ರಾರಂಭವಾಗಿದ್ದು, ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಿ ಸಚಿನ್‌ ಪೈಲಟ್‌ ರನ್ನು ಆಯ್ಕೆ ಮಾಡುವ ಹೈಕಮಾಂಡ್‌ ನಿರ್ಧಾರದ ಬಗ್ಗೆ ಗೆಹ್ಲೋಟ್‌ ಮತ್ತು ಬಣದ ಶಾಸಕರು ಅತೃಪ್ತರಾಗಿದ್ದಾರೆ. 2020 ರಲ್ಲಿ ಗೆಹ್ಲೋಟ್‌ ಸರ್ಕಾರದ ವಿರುದ್ಧ ಬಂಡಾಯವೆದ್ದು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಪಟ್ಟಿದ್ದ ಸಚಿನ್‌ ಪೈಲಟ್‌ ರಿಗೆ ಸಿಎಂ ಸ್ಥಾನ ನೀಡಬಾರದೆಂದು ಗೆಹ್ಲೋಟ್‌ ಬಣ ಪಟ್ಟು ಹಿಡಿದಿದೆ. ಬದಲಾಗಿ ಗೆಹ್ಲೋಟ್‌ ಸೂಚಿಸುವ ತನ್ನ ನಿಷ್ಟಾವಂತ ಶಾಸಕರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಗೆಹ್ಲೋಟ್‌ ಬಣದ ಪ್ರಮುಖ ಬೇಡಿಕೆಯಾಗಿದೆ. 

ಹೈಕಮಾಂಡ್‌ ಅನ್ನು ಒತ್ತಡಕ್ಕೆ ಸಿಲುಕಿಸಲು 92 ಶಾಸಕರು ತಮ್ಮ ರಾಜೀನಾಮೆಯನ್ನು ಸಲ್ಲಿಸಲು ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರ ನಿವಾಸಕ್ಕೆ ನಿನ್ನೆ ಸಂಜೆ ಹೋಗಿದ್ದು, ತಡರಾತ್ರಿವರೆಗೂ ಶಾಸಕರು ಸ್ಪೀಕರ್ ನಿವಾಸದಲ್ಲಿಯೇ ಇದ್ದರು. ಈ ನಡುವೆ, ಮಾಕನ್,  ಖರ್ಗೆ ಮತ್ತು  ಪೈಲಟ್ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News