ಅಸ್ಸಾಂ ಸಿಎಂ, ಸದ್ಗುರು ರಾತ್ರಿ ಸಫಾರಿ: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ

Update: 2022-09-26 07:21 GMT
Photo: Twitter/@himantabiswa

ಗುವಹಾಟಿ: ಕಝಿರಂಗ ರಾಷ್ಟ್ರೀಯ ಉದ್ಯಾನವನ ಪ್ರವೇಶಿಸುವ ಮೂಲಕ ಅಸ್ಸಾಂ(Assam) ಸಿಎಂ ಹಿಮಂತ ಬಿಸ್ವ ಶರ್ಮ(Himanta Biswa Sarma), ಸದ್ಗುರು ಜಗ್ಗಿ ವಾಸುದೇವ್(Sadhguru Jaggi Vasudev) ಹಾಗೂ ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುವಾ ಅವರು ವನ್ಯ ಜೀವಿ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದ್ದು, ಅಸ್ಸಾಂ ಮುಖ್ಯಮಂತ್ರಿ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಶನಿವಾರ ನಿಗದಿತ ವೇಳಾಪಟ್ಟಿ ನಂತರ ಈ ಮೂವರು ಉದ್ಯಾನವನ ಪ್ರವೇಶಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಅಸ್ಸಾಂನ ಇಬ್ಬರು ಹೋರಾಟಗಾರರು ಪೊಲೀಸ್ ದೂರು ದಾಖಲಿಸಿದ್ದರು.

ನಿಗದಿತ ಸಮಯ ಮಿತಿಯ ನಂತರ ಉದ್ಯಾನವನದಲ್ಲಿ ಸಫಾರಿ ಟೂರ್ ಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಅನುಮತಿಸುವುದಿಲ್ಲ ಎಂದು  ದೂರಿನಲ್ಲಿ ಹೇಳಲಾಗಿತ್ತು.

ಸಾಮಾಜಿಕ ಜಾಲತಾಣಗಳು ಹಾಗೂ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾದ ವೀಡಿಯೋಗಳಲ್ಲಿ ಸದ್ಗುರು ಅವರು ತೆರೆದ ಸಫಾರಿ ಎಸ್‍ಯುವಿ ಅನ್ನು ಸರ್ಮ ಮತ್ತು ಬರುವಾ ಜೊತೆಗೆ ಚಲಾಯಿಸುತ್ತಿರುವುದು ಕಾಣಿಸುತ್ತದೆ.

"ಉಲ್ಲಂಘನೆಯಾಗಿಲ್ಲ, ವನ್ಯಜೀವಿ ಕಾಯಿದೆಯ ಪ್ರಕಾರ ರಾತ್ರಿ ಹೊತ್ತು ಕೂಡ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸಲು ವಾರ್ಡನ್ ಅನುಮತಿಸಬಹುದಾಗಿದೆ. ಯಾವುದೇ ಕಾನೂನು ಇದನ್ನು ತಡೆಯುವುದಿಲ್ಲ. ಈ ಋತುವಿಗೆ ಈ ಪಾರ್ಕಿನ ಔಪಚಾರಿಕ ಆರಂಭ ನಿನ್ನೆ ನಡೆದಿದೆ. ಸದ್ಗುರು ಮತ್ತು ಶ್ರೀ ಶ್ರೀ ರವಿಶಂಕರ್ ಆಗಮಿಸಿದ್ದರು ಹಾಗೂ ಅವರು ಲಕ್ಷಗಟ್ಟಲೆ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಬಾರಿಯ ಪ್ರವಾಸಿ ಋತು ಉತ್ತಮವಾಗಲಿದೆ ಎಂಬ ನಿರೀಕ್ಷೆಯಿದೆ,'' ಎಂದು ಶರ್ಮ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯ ಅರಣ್ಯ ಸಂರಕ್ಷಕ ಎಂ ಕೆ ಯಾದವ, ಅರಣ್ಯ ಇಲಾಖೆಯೇ ಸದ್ಗುರು ಮತ್ತು ಮುಖ್ಯಮಂತ್ರಿಯನ್ನು ಆಹ್ವಾನಿಸಿತ್ತು. ಹೀಗಿರುವಾಗ ಸದ್ಗುರು ಮತ್ತು ಮುಖ್ಯಮಂತ್ರಿ ರಾತ್ರಿ ಹೊತ್ತು ಪಾರ್ಕ್ ಪ್ರವೇಶಿಸಿದ್ದಾರೆ ಎಂದು ಹೇಳುವುದು ತಪ್ಪು. ಅಲ್ಲಿ ಎಲ್ಲಾ ಏರ್ಪಾಟು ಮಾಡಲಾಗಿತ್ತು ಹಾಗೂ ಕತ್ತಲಾಗುತ್ತಿದೆ ಎಂದು ಏರ್ಪಾಟುಗಳನ್ನು ರದ್ದುಗೊಳಿಸುವುದು ಸಾಧ್ಯವಿಲ್ಲ,'' ಎಂದು ಅವರು ಹೇಳಿದರು.

ಈ ಘಟನೆ ಕುರಿತು ಎಫ್‍ಐಆರ್ ದಾಖಲಾಗಿಲ್ಲ ಆದರೆ ಆರಂಭಿಕ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ ನಲ್ಲಿ ಮುಂದುವರಿದ ಬಿಕ್ಕಟ್ಟು: ಹೈಕಮಾಂಡ್ ಸಂಪರ್ಕಕ್ಕೆ ಸಿಗದ ಗೆಹ್ಲೋಟ್‌ ಬಣದ ಶಾಸಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News