ತರಾತುರಿಯಲ್ಲಿ ಮಗಳ ಅಂತ್ಯಸಂಸ್ಕಾರ, ಅವಳ ಮುಖ ನೋಡಲೂ ಅವಕಾಶ ನೀಡಲಿಲ್ಲ: ಮೃತ ಯುವತಿಯ ತಾಯಿ ಆರೋಪ

Update: 2022-09-26 10:42 GMT

ಹೊಸದಿಲ್ಲಿ: ಉತ್ತರಾಖಂಡದ(Uttarakhand) ಬಿಜೆಪಿ (BJP) ನಾಯಕನ ಪುತ್ರ ಪ್ರಮುಖ ಆರೋಪಿಯಾಗಿರುವ ಯುವತಿಯ ಕೊಲೆ ಪ್ರಕರಣದಲ್ಲಿ, ಯುವತಿಯ ಮೃತದೇಹವನ್ನು ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮೃತದೇಹವನ್ನು ತನಗೆ ನೋಡಲು ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತ ಯುವತಿಯ ತಾಯಿ ಆರೋಪಿಸಿದ್ದಾರೆಂದು ndtv.com ವರದಿ ಮಾಡಿದೆ.

"ತನ್ನ ಮಗಳನ್ನು ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದು, ಆಕೆಯ ಮೃತದೇಹವನ್ನು ನೋಡಲು ಬಿಡಲೇ ಇಲ್ಲʼ ಎಂದು ಮೃತ ಯುವತಿಯ ತಾಯಿ ಹೇಳಿದ್ದಾರೆ. ತನ್ನನ್ನು ಮಗಳ ಬಳಿಗೆ ಕರೆದೊಯ್ಯುವ ನೆಪದಲ್ಲಿ ಮೋಸದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾಯಿ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಆದರೆ, ಇದೀಗ ಸಂತ್ರಸ್ತ ಯುವತಿಯ ತಾಯಿಯ ವಿಡಿಯೋವೊಂದು ಹೊರಬಿದ್ದಿದ್ದು, ಆಕೆ ತಾನು ಆರೋಗ್ಯವಾಗಿರುವುದಾಗಿ ಹೇಳಿಕೊಂಡಿದ್ದಾರೆ, ಸುಳ್ಳು ನೆಪದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ನನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದರು, ಆದರೆ ನನ್ನನ್ನು ಕರೆದುಕೊಂಡು ಹೋಗಲಿಲ್ಲ, ನನ್ನ ಮಗಳನ್ನು ತೋರಿಸುತ್ತೇವೆ ಎಂದು ಹೇಳಿ ಅವರು ನನ್ನನ್ನು ಇಲ್ಲಿಗೆ ಕರೆತಂದರು," ಎಂದು ಅಸಮಾಧಾನಗೊಂಡ ತಾಯಿ ವಿಡಿಯೋದಲ್ಲಿ ಹೇಳುವುದು ಸೆರೆಯಾಗಿದೆ. 

ತನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೇಳುತ್ತಲೇ ಇದ್ದಾಗ ಮಗಳ ಬಳಿಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿ ಅವರು ಸಮಾಧಾನಪಡಿಸಿದ್ದರು. ಆಮೇಲೆ ವೈದ್ಯರು ನನ್ನನ್ನು ಗಾಲಿಕುರ್ಚಿಯಲ್ಲಿ ಕೂರಿಸಿದರು. ಇದು ಏಕೆ ಬೇಕು ಎಂದು ನಾನು ಕೇಳಿದ್ದೆ, ಆದರೆ ಅವರು ನನ್ನನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು ಎಂದು ಅವರು ಆರೋಪಿಸಿದ್ದಾಗಿ ವರದಿಯಾಗಿದೆ.  

"ನನಗೆ ಸ್ವಲ್ಪವೂ ಅನಾರೋಗ್ಯವಿಲ್ಲ. ಅವರು ನನ್ನನ್ನು ಇಲ್ಲಿಗೆ ಬರುವಂತೆ ಮೋಸ ಮಾಡಿದರು. ಅವರು ನಮಗೆ ದ್ರೋಹ ಮಾಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News