ಬಿಲ್ಕಿಸ್ ಬಾನು ಬೆಂಬಲಿಸಿ ಏಕತೆಯ ರ‍್ಯಾಲಿಗೆ ಮುನ್ನ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಪೊಲೀಸ್ ವಶಕ್ಕೆ

Update: 2022-09-26 10:43 GMT
Photo credit: Twitter/@hrishirajanand_

ಅಹಮದಾಬಾದ್: ಬಿಲ್ಕಿಸ್ ಬಾನುಗೆ(Bilkis Bano) ಬೆಂಬಲ ವ್ಯಕ್ತಪಡಿಸಲು ಸೋಮವಾರ ಆಯೋಜಿಸಲಾಗಿದ್ದ ಮೆರವಣಿಗೆಗೆ ಮುಂಚಿತವಾಗಿಯೇ ಗೋಧ್ರಾ ಪೊಲೀಸರು ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ(Activist Sandeep Pandey) ಮತ್ತು ಇತರ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಪಾಂಡೆ ಮತ್ತು ಇತರ ಕಾರ್ಯಕರ್ತರು "ಬಿಲ್ಕಿಸ್ ಬಾನುಗೆ ಕ್ಷಮೆಯಾಚನೆ" ಎಂಬ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಲು ಸಜ್ಜಾಗಿದ್ದರು.

ಸೋಮವಾರದಂದು ಗುಜರಾತ್‌ನ ದಾಹೋದ್ ಜಿಲ್ಲೆಯ ರಂಧಿಕ್‌ಪುರ್‌ನಲ್ಲಿರುವ ಬಿಲ್ಕಿಸ್‌ ಬಾನು ಗ್ರಾಮದಿಂದ ಮೆರವಣಿಗೆಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು, ಇದು ಅಕ್ಟೋಬರ್ 4 ರಂದು ಅಹಮದಾಬಾದ್‌ನಲ್ಲಿ "ಹಿಂದೂ-ಮುಸ್ಲಿಂ ಏಕತಾ ಸಮಿತಿ"ಯ ಬ್ಯಾನರ್ ಅಡಿಯಲ್ಲಿ ಮುಕ್ತಾಯಗೊಳ್ಳಬೇಕಿತ್ತು.

"ರವಿವಾರ ರಾತ್ರಿ 10:30 ರ ಸುಮಾರಿಗೆ ಗೋಧ್ರಾದಿಂದ (ಪಂಚಮಹಲ್ ಜಿಲ್ಲೆಯಲ್ಲಿ) ಸಂದೀಪ್ ಪಾಂಡೆ ಮತ್ತು ಇತರ ಮೂವರನ್ನು ಬಂಧಿಸಲಾಯಿತು. ಅವರು ಇನ್ನೂ ಬಂಧನದಲ್ಲಿದ್ದಾರೆ." ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೊಲೀಸರ ಕ್ರಮವನ್ನು ಹಿಂದೂ-ಮುಸ್ಲಿಂ ಏಕತಾ ಸಮಿತಿ ಖಂಡಿಸಿದೆ.

ಈ ವರ್ಷ ಆಗಸ್ಟ್ 15 ರಂದು ಗುಜರಾತ್ ಸರ್ಕಾರವು ಬಿಲ್ಕಿಸ್‌ ಬಾನು ಅತ್ಯಾಚಾರ ಮತ್ತು ಸಾಮೂಹಿಕ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದ 11 ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ ನಂತರ ಬಿಲ್ಕಿಸ್ ಬಾನು ಅವರ ಕ್ಷಮೆಯಾಚನೆಗೆ ಆಗ್ರಹಿಸಿ ಮೆರವಣಿಗೆ ನಡೆಸಲು ಆಯೋಜಿಸಲಾಗಿತ್ತು. 

ಗೋಧ್ರಾ ನಂತರದ ಗಲಭೆ ಪ್ರಕರಣದಲ್ಲಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ಆರೋಪದಲ್ಲಿ ಅಪರಾಧಿಗಳು ಗೋಧ್ರಾ ಉಪ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು.

ಗುಜರಾತ್ ಸರ್ಕಾರವು ನಂತರ ತನ್ನ ಉಪಶಮನ ನೀತಿಯ ಪ್ರಕಾರ 11 ಅಪರಾಧಿಗಳನ್ನು ಬಿಡುಗಡೆ ಮಾಡಲು ಆದೇಶವನ್ನು ಹೊರಡಿಸಿತ್ತು ಮತ್ತು ಅವರನ್ನು 15 ಆಗಸ್ಟ್ 2022 ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News