ಜಾಗತಿಕ ಖ್ಯಾತಿಯ ಇಸ್ಲಾಮಿಕ್ ವಿದ್ವಾಂಸ, ಮುಸ್ಲಿಂ ವಿದ್ವಾಂಸರ ಯೂನಿಯನ್ ಅಧ್ಯಕ್ಷ ಯೂಸುಫ್ ಅಲ್ ಖರ್ಝಾವಿ ನಿಧನ

Update: 2022-09-26 11:22 GMT
ಯೂಸುಫ್ ಅಲ್ ಖರ್ಝಾವಿ

ಹೊಸದಿಲ್ಲಿ: ಜಾಗತಿಕ ಖ್ಯಾತಿಯ ಖ್ಯಾತ ಮುಸ್ಲಿಂ ವಿದ್ವಾಂಸ ಹಾಗೂ ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸರ ಯೂನಿಯನ್ ಅಧ್ಯಕ್ಷ ಯೂಸುಫ್ ಅಲ್ ಖರ್ಝಾವಿ ಅವರು ಸೋಮವಾರ (ಸೆ.26) ನಿಧನರಾಗಿದ್ದಾರೆ.

ಈಜಿಪ್ಟ್ ದೇಶದ ಮುಸ್ಲಿಂ ವಿದ್ವಾಂಸರಾಗಿದ್ದ ಯೂಸುಫ್ ಅಲ್ ಖರ್ಝಾವಿ ಅವರು ದೋಹಾ, ಕತರ್ ನಲ್ಲಿ ವಾಸ್ತವ್ಯವಿದ್ದರು. ಈಗ ಅಲ್ಲೇ ನಿಧನರಾಗಿದ್ದಾರೆ. 

ಸೆಪ್ಟೆಂಬರ್ 9, 1926 ರಲ್ಲಿ ಜನಿಸಿದ್ದ ಅವರು 1997 ರಲ್ಲಿ IslamOnline ಎಂಬ ವೆಬ್‍ಸೈಟ್ ಆರಂಭಕ್ಕೆ ಸಹಕರಿಸಿದ್ದರಲ್ಲದೆ ಈ ವೆಬ್ ತಾಣದ ಮುಖ್ಯ ಧಾರ್ಮಿಕ ವಿದ್ವಾಂಸರಾಗಿಯೂ ಕಾರ್ಯನಿರ್ವಹಿಸಿದ್ದರು.

ಈಜಿಪ್ಟ್ ನ ಮುಸ್ಲಿಂ ಬ್ರದರ್ ಹುಡ್ ನ ಮುಖ್ಯ ಮಾರ್ಗದರ್ಶಕರಾಗಿದ್ದ ಅವರು ಮುಹಮ್ಮದ್ ಮುರ್ಸಿ ಅವರು ಅಧ್ಯಕ್ಷರಾಗಲು ಕಾರಣವಾಗಿದ್ದ  2011 ರ ತಹ್ರೀರ್ ಚೌಕ ಕ್ರಾಂತಿಯ ಪ್ರೇರಕ ಶಕ್ತಿಯಾಗಿದ್ದರು. ಜಾಗತಿಕವಾಗಿ ಅತ್ಯಂತ ಪ್ರಭಾವಿ ವಿದ್ವಾಂಸರಾಗಿದ್ದ ಅವರು 120ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ 'ದಿ ಲಾಫುಲ್ ಎಂಡ್ ದಿ ಪ್ರೊಹಿಬಿಟೆಡ್ ಇನ್ ಇಸ್ಲಾಮ್', 'ಇಸ್ಲಾಮ್: ದಿ ಫ್ಯೂಚರ್ ಸಿವಿಲೈಝೇಶನ್'' ಸೇರಿವೆ. ಮುಸ್ಲಿಂ ವಿದ್ವಾಂಸರಾಗಿ ಅವರು ನೀಡಿದ ಕೊಡುಗೆಗಳಿಗೆ ಅವರು ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು ಹಾಗೂ ಜಗತ್ತಿನ ಅತ್ಯಂತ ಪ್ರಭಾವಿ ಇಸ್ಲಾಮಿಕ್ ವಿದ್ವಾಂಸರಲ್ಲೊಬ್ಬರೆಂದು ಪರಿಗಣಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News