ಅನಿಲ್ ಅಂಬಾನಿಗೆ ಐಟಿ ಇಲಾಖೆ ನೀಡಿದ ನೋಟಿಸಿಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ

Update: 2022-09-26 11:41 GMT
ಅನಿಲ್ ಅಂಬಾನಿ (PTI)

ಮುಂಬೈ: ಕಾಳ ಧನ ಕಾಯಿದೆಯನ್ವಯ ಅಗತ್ಯ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ(Anil Ambani) ಅವರಿಗೆ ಆದಾಯ ತೆರಿಗೆ ನೀಡಿದ್ದ ಕಾನೂನು ಕ್ರಮದ ನೋಟಿಸಿಗೆ ಬಾಂಬೆ ಹೈಕೋರ್ಟ್(Bombay HC) ಸೋಮವಾರ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ ಎಂದು Live Law ವರದಿ ಮಾಡಿದೆ.

ಮುಂದಿನ ವಿಚಾರಣೆ ನವೆಂಬರ್ 17ರಂದು ನಡೆಯುವ ಮೊದಲು ಅನಿಲ್ ಅಂಬಾನಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವ ಹಾಗಿಲ್ಲ ಎಂಬ ಸೂಚನೆಯನ್ನೂ ಆದಾಯ ತೆರಿಗೆ ಇಲಾಖೆಗೆ ಹೈಕೋರ್ಟ್ ನೀಡಿದೆ.

ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ರೂ. 814 ಕೋಟಿಗೂ ಹೆಚ್ಚು ಅಘೋಷಿತ ಮೊತ್ತದ ಮೇಲೆ ರೂ. 420 ಕೋಟಿ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಆಗಸ್ಟ್ 8ರಂದು ಅಂಬಾನಿಗೆ ಐಟಿ ನೋಟಿಸ್ ಜಾರಿಯಾಗಿತ್ತು.

ಆದರೆ ಕಾಳ ಧನ ಕಾಯ್ದೆ 2015ರಲ್ಲಿ ಜಾರಿಯಾಗಿದ್ದರಿಂದ 2006 ಹಾಗೂ 2012 ರ ನಡುವೆ ಮಾಡಲಾದ ಈ ಆರ್ಥಿಕ ವ್ಯವಹಾರಗಳಿಗೆ ತಮ್ಮ ಕಕ್ಷಿಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಾಗಿಲ್ಲ ಎಂದು ಅನಿಲ್ ಅಂಬಾನಿ ಅವರ ವಕೀಲರಾದ ರಫೀಖ್ ದಾದಾ ವಾದಿಸಿದ್ದರು.

ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲ ಮತ್ತು ಆರ್ ಎನ್ ಲಡ್ಡಾ ಅವರ ವಿಭಾಗೀಯ ಪೀಠವು ಈ ಕಾಯ್ದೆಯ ಪೂರ್ವಾನ್ವಯತೆಯ ಕುರಿತ ನಿರ್ಧಾರ ಬಾಂಬೆ ಹೈಕೋರ್ಟ್ ಸಹಿತ ವಿವಿಧ ಹೈಕೋರ್ಟ್‍ಗಳ ಮುಂದೆ ಬಾಕಿಯಿರುವುದನ್ನು ಪರಿಗಣಿಸಿತು.

ಈ ಕುರಿತಂತೆ ಅಂಬಾನಿ ಪ್ರಕರಣದಲ್ಲಿ ಕಾಯಿದೆಯ ಪೂರ್ವಾನ್ವಯತೆಯ ಬಗ್ಗೆ ಆದಾಯ ತೆರಿಗೆ ಇಲಾಖೆಯ ಪ್ರತಿಕ್ರಿಯೆಯನ್ನೂ ಹೈಕೋರ್ಟ್ ಕೋರಿದೆ. ಉತ್ತರ ನೀಡಲು ಇಲಾಖೆ ಸಮಯಾವಕಾಶ ಕೋರಿದ್ದರಿಂದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ಜಾಗತಿಕ ಖ್ಯಾತಿಯ ಇಸ್ಲಾಮಿಕ್ ವಿದ್ವಾಂಸ, ಮುಸ್ಲಿಂ ವಿದ್ವಾಂಸರ ಯೂನಿಯನ್ ಅಧ್ಯಕ್ಷ ಯೂಸುಫ್ ಅಲ್ ಖರ್ಝಾವಿ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News