ಡಾಲರ್‌ನೆದುರು 81.67ರ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

Update: 2022-09-26 16:00 GMT

ಹೊಸದಿಲ್ಲಿ,ಸೆ.26: ಅಮೆರಿಕದ ಡಾಲರ್‌ನೆದುರು ಸೋಮವಾರ 58 ಪೈಸೆಗಳಷ್ಟು ಕುಸಿದ ಭಾರತೀಯ ರೂಪಾಯಿ 81.67ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ದಾಖಲಿಸುವುದರೊಂದಿಗೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಇದರೊಂದಿಗೆ ಸತತ ಎಂಟನೇ ವಹಿವಾಟು ದಿನವೂ ರೂಪಾಯಿ ಪತನಗೊಂಡಿದೆ.ರೂಪಾಯಿ ಶುಕ್ರವಾರ ಮೊದಲ ಬಾರಿಗೆ 81ರ ಗಡಿಯಿಂದ ಕೆಳಕ್ಕಿಳಿದಿತ್ತು. ಅಂದು ಅದು 80.98ರ ಸಾರ್ವಕಾಲಿಕ ಕನಿಷ್ಠ ದಾಖಲೆಯೊಂದಿಗೆ ಮುಕ್ತಾಯಗೊಂಡಿತ್ತು.

 ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ಭೂರಾಜಕೀಯ ಅಪಾಯ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಏರಿಕೆಗಳು ರೂಪಾಯಿ
ಮೌಲ್ಯ ಕುಸಿಯಲು ಕಾರಣಗಳಾಗಿವೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಬೆಟ್ಟು ಮಾಡಿದ್ದಾರೆ.

ಈ ವಾರ ನಡೆಯಲಿರುವ ಆರ್‌ಬಿಐ ಸಭೆಯ ಮೇಲೆ ಈಗ ಗಮನ ಕೇಂದ್ರೀಕೃತವಾಗಿದೆ ಎಂದು ಹೇಳಿದ ರಿಲಯನ್ಸ್ ಸೆಕ್ಯೂರಿಟಿಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ ಅಯ್ಯರ್ ಅವರು, ‘ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸಲು ಮತ್ತು ರೂಪಾಯಿ ಇನ್ನಷ್ಟು ದುರ್ಬಲಗೊಳ್ಳುವುದನ್ನು ತಡೆಯಲು ಆರ್‌ಬಿಐ ಬಡ್ಡಿದರಗಳನ್ನು 50 ಪೈಸೆಗಳಷ್ಟು ಹೆಚ್ಚಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ’ ಎಂದು ಹೇಳಿದರು.

ರೂಪಾಯಿ ಅಪಮೌಲ್ಯದ ನಡುವೆಯೇ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೋ ಅವರು,‘ವಿತ್ತ ಸಚಿವಾಲಯದ ಮೇಲೆ ಹೆಚ್ಚು ಮತ್ತು ಬಾರಾಮತಿಯ ಮೇಲೆ ಕಡಿಮೆ’ ಗಮನವನ್ನು ಕೇಂದ್ರೀಕರಿಸುವಂತೆ ಸೋಮವಾರ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದಾರೆ. ಪುಣೆ ಜಿಲ್ಲೆಯಲ್ಲಿರುವ ಬಾರಾಮತಿ ಪಟ್ಟಣವು ಎನ್‌ಸಿಪಿ ವರಿಷ್ಠ ಶರದ ಪವಾರ್ ಅವರ ತವರು ಮತ್ತು ಭದ್ರಕೋಟೆಯಾಗಿದೆ.

144 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಬಿಜೆಪಿಯ ಅಭಿಯಾನದ ಅಂಗವಾಗಿ ಸೀತಾರಾಮನ್ ಕಳೆದ ವಾರ ಬಾರಾಮತಿಗೆ ಮೂರು ದಿನಗಳ ಭೇಟಿ ನೀಡಿದ್ದರು.

ಇತರ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್‌ನೆದುರು ರೂಪಾಯಿ ದೃಢವಾಗಿ ನಿಂತಿದೆ ಎಂದು ಶನಿವಾರ ಹೇಳಿದ್ದ ಸೀತಾರಾಮನ್,ವಿತ್ತ ಸಚಿವಾಲಯ ಮತ್ತು ಆರ್‌ಬಿಐ ರೂಪಾಯಿಯ ಮೇಲೆ ನಿಕಟ ನಿಗಾಯಿರಿಸಿವೆ ಎಂದು ತಿಳಿಸಿದ್ದರು.

ರೂಪಾಯಿ ಮುಂದಿನ ತಿಂಗಳು 81.50ಕ್ಕೆ ಅಪಮೌಲ್ಯಗೊಳ್ಳುವ ಸಾಧ್ಯತೆಯಿದೆ ಎಂದು ಐಸಿಐಸಿಐ ಸೆಕ್ಯೂರಿಟಿಸ್ ಕಳೆದ ವಾರ ಹೇಳಿತ್ತು.

ಈ ನಡುವೆ ಭಾರತೀಯ ಶೇರು ಮಾರುಕಟ್ಟೆಗಳು ಸತತ ನಾಲ್ಕನೇ ದಿನವಾದ ಸೋಮವಾರವೂ ಪತರಗುಟ್ಟಿವೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 953.70 ಅಂಕಗಳ ನಷ್ಟದೊಂದಿಗೆ 57,145.22ರಲ್ಲಿ ಮುಕ್ತಾಯಗೊಂಡಿದ್ದರೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಫಿಫ್ಟಿ 311.05 ಅಂಕಗಳ ಕುಸಿತದೊಂದಿಗೆ 17,016.30ಕ್ಕೆ ದಿನದಾಟವನ್ನು ಮುಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News