ಬಲಪಂಥೀಯ ಗುಂಪುಗಳ ವಿರುದ್ಧ ಹಿಂಸೆಗೆ ಕಮಲ್ ಹಾಸನ್ ಖಂಡನೆ

Update: 2022-09-26 15:27 GMT
ಕಮಲ್ ಹಾಸನ್ (PTI)

ಚೆನ್ನೈ: ಎನ್‌ಐಎ(NIA) ನಡೆಸಿದ್ದ ರಾಷ್ಟ್ರವ್ಯಾಪಿ ದಾಳಿಗಳ ಭಾಗವಾಗಿ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಪಿಎಫ್‌ಐ(PFI) ಪದಾಧಿಕಾರಿಗಳ ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಶುಕ್ರವಾರದಿಂದ ಬಿಜೆಪಿ(BJP),ಆರೆಸ್ಸೆಸ್(RSS) ಮತ್ತು ಹಿಂದು ಮುನ್ನಾನಿ ಕಚ್ಚಿ (ಪಿಎಂಕೆ) ಸದಸ್ಯರ ವಿರುದ್ಧ ಹಿಂಸಾಚಾರದ ಘಟನೆಗಳನ್ನು ನಟ-ರಾಜಕಾರಣಿ ಹಾಗೂ ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ (Kamal Haasan) ಖಂಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಬಿಜೆಪಿ, ಆರೆಸ್ಸೆಸ್ ಮತ್ತು ಪಿಎಂಕೆ ಸದಸ್ಯರ ವಿರುದ್ಧ ಪೆಟ್ರೋಲ್ ಬಾಂಬ್ ಎಸೆತ ಮತ್ತು ಬೆಂಕಿ ಹಚ್ಚುವಿಕೆ ಘಟನೆಗಳು ತೀವ್ರ ಆಘಾತಕಾರಿಯಾಗಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಅವರು, ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ನಿಗೂಢ ವ್ಯಕ್ತಿಗಳನ್ನು ಬಂಧಿಸಲಾಗಿಲ್ಲ. ಇಂತಹ ಘಟನೆಗಳು ಸಂಭವಿಸಿದಾಗ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಯಾರೇ ಆದರೂ ಮೌನವಾಗಿರುವುದಿಲ್ಲ. ಇಂತಹ ಘಟನೆಗಳು ಬೃಹತ್ ಪ್ರಮಾಣದ ದಂಗೆಗೆ ತಿರುಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ.

ತನ್ನ ಪಕ್ಷವು ಬಿಜೆಪಿಯ ಅಭಿಮಾನಿಯಲ್ಲ, ಆದರೆ ನಾವು ಪ್ರಜಾಪ್ರಭುತ್ವದ ಅನುಯಾಯಿಗಳಾಗಿದ್ದೇವೆ. ಹಿಂಸೆಯ ಮೂಲಕ ಗೆಲ್ಲಲು ಪ್ರಯತ್ನಿಸುವುದು ಪಶು ಪ್ರವೃತ್ತಿಯಾಗಿದೆ. ಇಂತಹ ಪಶು ಪ್ರವೃತ್ತಿ ಹೊಂದಿರುವ ಯಾರೇ ಆದರೂ ಈ ದೇಶದಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗಬಾರದು ಎಂದು ಹೇಳಿರುವ ಕಮಲ ಹಾಸನ್, ತನ್ನ ಪಕ್ಷವು ಯಾವುದೇ ಸಂದರ್ಭದಲ್ಲಿಯೂ ತಮಿಳುನಾಡಿನಲ್ಲಿ ಹಿಂಸೆಯ ಸಂಸ್ಕೃತಿಯು ಬೇರೂರಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಬಾಂಬ್‌ಗಳು ಮತ್ತು ದಂಗೆಗಳ ಸಂಸ್ಕೃತಿಯನ್ನು ಕಠಿಣವಾಗಿ ಮಟ್ಟ ಹಾಕುವಂತೆ ರಾಜ್ಯ ಸರಕಾರ ಮತ್ತು ಪೊಲೀಸರನ್ನು ಆಗ್ರಹಿಸಿರುವ ಅವರು, ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ಅಗತ್ಯವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News