ತಮಿಳುನಾಡು:ಬಿಜೆಪಿ,ಆರೆಸ್ಸೆಸ್ ಸದಸ್ಯರ ಆಸ್ತಿಗಳ ಮೇಲೆ ದಾಳಿ; 11 ಮಂದಿ ಆರೋಪಿಗಳ ಬಂಧನ

Update: 2022-09-26 15:54 GMT

ಚೆನ್ನೈ,ಸೆ.26: ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ಆಸ್ತಿಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ಐವರು ಎಸ್‌ಡಿಪಿಐ ಕಾರ್ಯಕರ್ತರು ಸೇರಿದಂತೆ 11 ಜನರನ್ನು ರವಿವಾರ ಸೇಲಮ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೆ.22ರಂದು ಎನ್‌ಐಎ 11 ರಾಜ್ಯಗಳಲ್ಲಿ ಪಿಎಫ್‌ಐಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ,ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ 100ಕ್ಕೂ ಅಧಿಕ ನಾಯಕರು ಮತ್ತು ಪದಾಧಿಕಾರಿಗಳನ್ನು ಬಂಧಿಸಿದ ಬಳಿಕ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ಆಸ್ತಿಗಳ ಮೇಲೆ ದಾಳಿಗಳು ನಡೆದಿದ್ದವು.

ರವಿವಾರ ಕೆಲವು ವ್ಯಕ್ತಿಗಳು ಆರೆಸ್ಸೆಸ್ ಸೇಲಂ ಪಟ್ಟಣ ಸಮುದಾಯ ಸಂಘಟಕ ವಿ.ಕೆ.ರಾಜನ್ ನಿವಾಸದ ಮೇಲೆ ಸೀಮೆಎಣ್ಣೆ ತುಂಬಿದ್ದ ಬಾಟಲಿಗಳನ್ನು ಎಸೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎನ್.ಸೈಯದ್ ಅಲಿ ಮತ್ತು ವಾರ್ಡ್ ಅಧ್ಯಕ್ಷ ಕೆ.ಖಾದರ್ ಹುಸೇನ್ ಅವರನ್ನು ಬಂಧಿಸಿದ್ದರು. ಆರೋಪಿಗಳು ಬಳಸಿದ್ದ ಬೈಕ್‌ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಳಿಕೋರರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರುವುದಾಗಿ ಡಿಜಿಪಿ ಶೈಲೇಂದ್ರ ಬಾಬು ಎಚ್ಚರಿಕೆ ನೀಡಿದ್ದಾರೆ. ದಾಳಿಗಳಿಗೆ ಸಂಬಂಧಿಸಿದಂತೆ ಈವರೆಗೆ ಕನಿಷ್ಠ 250 ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ರವಿವಾರ ದಾಳಿಗಳ ಬಳಿಕ ಕೊಯಿಮತ್ತೂರಿನಲ್ಲಿ 3,500 ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂಭಾವ್ಯ ಗುರಿಗಳೆಂದು ಗುರುತಿಸಲಾಗಿರುವ ಮನೆಗಳು,ಕಚೇರಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ಪೊಲೀಸರು ರಕ್ಷಣೆಯನ್ನು ಒದಗಿಸುತ್ತಿದ್ದಾರೆ ಎಂದು ಐಜಿಪಿ ಅಸ್ರಾ ಗರ್ಗ್ ತಿಳಿಸಿದರು.

ಈ ನಡುವೆ ಬಿಜೆಪಿ ರಾಜ್ಯ ವರಿಷ್ಠ ಕೆ.ಅಣ್ಣಾಮಲೈ ಅವರು ದಾಳಿಗಳ 19 ಘಟನೆಗಳನ್ನು ಉಲ್ಲೇಖಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News