ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ: ಶಾಸಕ ಸುನಿಲ್ ನಾಯ್ಕ ಆಕ್ಷೇಪ

Update: 2022-09-26 17:08 GMT

ಭಟ್ಕಳ: ಆ.2ರಂದು ಸುರಿದ ಭಾರೀ ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದ್ದು ಬಡವರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಸುನಿಲ್ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪರಿಹಾರ ವಿತರಣೆಯ ಕುರಿತು ತೀವ್ರ ಆಕ್ಷೇಪ ಎತ್ತಿದ ಶಾಸಕ ಅನೇಕ ಕಡೆಗಳಲ್ಲಿ ಮಣ್ಣಿನ ಗೋಡೆಯ ಮನೆಯು ಬಿದ್ದು ಹೋಗಿವೆ. ಒಂದು ಗೋಡೆ ಬಿದ್ದು ಹೋದರೆ ಅದರಲ್ಲಿ ವಾಸ್ತವ್ಯ ಮಾಡಲು ಸಾಧ್ಯವೂ ಇಲ್ಲ, ಒಂದೇ ಗೋಡೆಯನ್ನು ಪುನಃ ನಿರ್ಮಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅಂತಹ ಮನೆಗಳನ್ನು ಸಿ ವರ್ಗದ ಹಾನಿ ಎಂದು ಪರಿಗಣಿಸಿ ಐವತ್ತು ಸಾವಿರ ರೂ. ಪರಿಹಾರ ವಿತರಣೆ ಮಾಡಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷವಲ್ಲದೇ, ಅಸಡ್ಡೆಯ ವರ್ತನೆಯಾಗಿದೆ. ಯಾರೋ ದೂರವಾಣಿ ಮಾಡಿ ಏನೋ ಹೇಳುತ್ತಾರೆಂದು ಕೆಲವು ಕಡೆಗಳಲ್ಲಿ ಹಾನಿಯಾಗಿದ್ದ ಮನೆಯ ಹಾನಿ ಪ್ರಮಾಣವನ್ನು ಪರಿಗಣಿಸಿಲ್ಲ. ಹೀಗಾದರೆ ಬಡವನ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ ಅವರು ಒಂದು ವಾರದಲ್ಲಿ ಅವರೆಲ್ಲರಿಗೂ ನಿಜವಾಗಿ ಹಾನಿಯಾದಷ್ಟು ಪರಿಹಾರ ನೀಡಬೇಕು. ಸ್ವತಹ ಉಸ್ತುವಾರಿ ಸಚಿವರು ಬಿದ್ದು ಹೋದ ಮನೆಗಳಿಗೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಾಸಕರ ದೂರನ್ನು ಪರಿಗಣಿಸಿ, ಮತ್ತೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಡವರಿಗೆ ಸರಕಾರಿ ಸೌಲತ್ತನ್ನು ನೀಡುವಾಗ ಸ್ವಲ್ಪ ಮಾನವೀಯತೆಯನ್ನು ಪರಿಗಣಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಂಚು ಕಳಚಿ ಪರಿಹಾರಕ್ಕೆ ಅರ್ಜಿ: ಬೈಲೂರು ಗ್ರಾಮ ಪಂಚಾಯತ್ ಮನೆಯೊಂದರ ಪರಿಹಾರ ನೀಡಲು ತೊಂದರೆ ಏನು ಎಂದು ವಿಚಾರಿಸಿದಾಗ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ಲತಾ ನಾಯ್ಕ ಅವರು ಪಕ್ಕದ ಮನೆಯವರು ತಕರಾರು ಮಾಡಿದ್ದಾರೆ. ಮನೆಯ ಹಂಚನ್ನು ಕಳಚಿಟ್ಟು ಮಳೆಯಲ್ಲಿ ಬಿದ್ದು ಹೋಗಿದೆ ಎಂದು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ. ನಮ್ಮಲ್ಲಿ ವಿಡಿಯೋ ಇದೆ ಎಂದಿದ್ದಾರೆ ಎಂದಾಗ ಸಚಿವರು ಅವರಿಗೆ ನೋಟೀಸು ನೀಡಿ ವಿಡಿಯೋ ಹಾಜರು ಪಡಿಸಲು ತಿಳಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News