"ರೈತರ ಪ್ರತಿಭಟನೆ ಸಂದರ್ಭ ಹಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸೂಚಿಸಿತ್ತು"

Update: 2022-09-26 17:31 GMT

ಬೆಂಗಳೂರು, ಸೆ. 26: ಕಳೆದ ವರ್ಷ ದಿಲ್ಲಿ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ಸಂದರ್ಭ ಹಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕೇಂದ್ರ ಸರಕಾರ ತನಗೆ ಸೂಚಿಸಿತ್ತು ಎಂದು ಟ್ವಿಟರ್ ಸೋಮವಾರ  ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಪುನರಾವರ್ತಿತ ಅಪರಾಧದ ಹೊರತು  ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ಟ್ವೀಟ್ ಅನ್ನು ನಿರ್ಬಂಧಿಸಲು ಅವಕಾಶ ನೀಡುತ್ತದೆಯೇ ಹೊರತು ಇಡೀ ಖಾತೆಯನ್ನಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠಕ್ಕೆ ಟ್ವಿಟರ್ ತಿಳಿಸಿದೆ.

2021 ಫೆಬ್ರವರಿ ಹಾಗೂ 2022 ಫೆಬ್ರವರಿ ನಡುವೆ ಕೇಂದ್ರ ಸರಕಾರ ನೀಡಿದ 10 ನಿರ್ಬಂಧ ಆದೇಶಗಳಿಗೆ  ಸಂಬಂಧಿಸಿ ಟ್ವಿಟರ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅರವಿಂದ ಎಸ್. ದಾತರ್, ಮಾಹಿತಿ ತಂತ್ರಜ್ಞಾನದ ಸೆಕ್ಷನ್ 69ರಲ್ಲಿ ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಯಾವುದೇ ಅವಕಾಶ ಇಲ್ಲ ಎಂದರು.

ಸುದ್ದಿ ಪತ್ರಿಕೆಗಳು ಹಾಗೂ ಟೆಲಿವಿಷನ್ ಚಾನೆಲ್‌ಗಳು ರೈತರ ಪ್ರತಿಭಟನೆಗಳನ್ನು ವರದಿ ಮಾಡುವ ಸಂದರ್ಭ, ಎಲ್ಲ ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ನನ್ನ ಕಕ್ಷಿದಾರ (ಟ್ವಿಟರ್)ನಿಗೆ ಯಾಕೆ ಸೂಚಿಸಲಾಯಿತು ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ದಾತರ್, ವಾಕ್ ಸ್ವಾತಂತ್ರ್ಯ ಸರಕಾರವನ್ನು ಟೀಕಿಸುವ ಹಕ್ಕನ್ನು ಕೂಡ ಒಳಗೊಂಡಿದೆ. ಕಾನೂನಿನ ಪರಿಧಿಯ ಒಳಗೆ ಟೀಕೆಗಳನ್ನು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಕೇಂದ್ರ ಸರಕಾರದ ಆದೇಶ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂದರು.

ಅಮೆರಿಕದಂತಹ ಇತರ ದೇಶಗಳ ನ್ಯಾಯವ್ಯಾಪ್ತಿಗಳಲ್ಲಿ ಇಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ತಿಳಿಸಿ ಎಂದು ನ್ಯಾಯಮೂರ್ತಿ ದೀಕ್ಷಿತ್ ಅವರು ಹೇಳಿದರು. ಇದಕ್ಕೆ ವಕೀಲರು ಸಮಯಾವಕಾಶ ಕೋರಿದರು. ಆದುದರಿಂದ ದೀಕ್ಷಿತ್ ಅವರು ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದರು.

ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಟ್ವಿಟರ್, ಕೇಂದ್ರ ಸರಕಾರದ ನಿರ್ಬಂಧ ಆದೇಶ ಸಂವಿಧಾನದ ಅಡಿಯ ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸಿದೆ. ಕೇಂದ್ರ ಸರಕಾರದ ನಡೆ ನಿರಂಕುಶಾಧಿಕಾರ ಹಾಗೂ ಐಟಿ ಕಾಯ್ದೆ ಸೆಕ್ಷನ್ 69 ಎಯ ಉಲ್ಲಂಘನೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News