ಅಮೆರಿಕಾದ ವಿಸಲ್‌ಬ್ಲೋವರ್‌ ಎಡ್ವರ್ಡ್‌ ಸ್ನೋಡೆನ್‌ಗೆ ರಷ್ಯಾ ಪೌರತ್ವ ನೀಡಿದ ಪುಟಿನ್‌

Update: 2022-09-27 06:48 GMT
ಎಡ್ವರ್ಡ್‌ ಸ್ನೋಡೆನ್‌ (Photo: Twitter/@ANI)

ಮಾಸ್ಕೋ: ಅಮೆರಿಕಾದ ಮಾಜಿ ವಿಸಲ್‌ಬ್ಲೋವರ್‌, ಅಲ್ಲಿನ ನ್ಯಾಷನಲ್‌ ಸೆಕ್ಯುರಿಟಿ ಏಜನ್ಸಿಯ ರಹಸ್ಯ ಗೂಢಚರ್ಯೆ ಕಾರ್ಯಾಚರಣೆಯ ಮಟ್ಟದ ಕುರಿತು ಒಂಬತ್ತು ವರ್ಷಗಳ ಹಿಂದೆ ಬಹಿರಂಗಗೊಳಿಸಿದ್ದ ಎಡ್ವರ್ಡ್‌ ಸ್ನೋಡೆನ್‌(Edward Snowden) ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌(Vladimir Putin) ತಮ್ಮ ದೇಶದ ಪೌರತ್ವ(Russian Citizenship) ನೀಡಿದ್ದಾರೆ.

39 ವರ್ಷದ ಸ್ನೋಡೆನ್‌ ಅವರು ಅಮೆರಿಕಾದಿಂದ ಪಲಾಯನಗೈದ ನಂತರ ಅವರಿಗೆ ರಷ್ಯಾ 2013 ರಲ್ಲಿ ಆಶ್ರಯ ನೀಡಿತ್ತು.

ಗೂಢಚರ್ಯೆ ಆರೋಪದ ಮೇಲೆ ವಿಚಾರಣೆ ಎದುರಿಸಲು ಸ್ನೋಡೆನ್‌ ದೇಶಕ್ಕೆ ವಾಪಸಾಗಬೇಕೆಂದು ಅಮೆರಿಕಾ ಬಹಳಷ್ಟು ಪ್ರಯತ್ನಿಸಿತ್ತು.

ರಷ್ಯಾ ಅಧ್ಯಕ್ಷ ತಮಗೆ ನೀಡಿದ ಪೌರತ್ವದ ಕುರಿತು ಸ್ನೋಡೆನ್‌ ಇನ್ನೂ ಪ್ರತಿಕ್ರಿಯಿಸಿಲ್ಲ. ಒಟ್ಟು 72 ವಿದೇಶಿ ವ್ಯಕ್ತಿಗಳಿಗೆ ಪುಟಿನ್‌ ರಷ್ಯಾ ಪೌರತ್ವ ನೀಡಿದ್ದು ಆ ಪಟ್ಟಿಯಲ್ಲಿ ಸ್ನೋಡೆನ್‌ ಅವರ ಹೆಸರು ಕೂಡ ಇದೆ.

ಸ್ನೋಡೆನ್‌ ಅವರ ಪತ್ನಿ ಲಿಂಡ್ಸೇ ಮಿಲ್ಸ್‌ ಕೂಡ  ಪೌರತ್ವಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಸ್ನೋಡೆನ್‌ ವಕೀಲರಾದ ಆನಾಟೊಲಿ ಕುಚೆರೆನಾ ಹೇಳಿದ್ದಾರೆ.

ರಷ್ಯಾವು ಸ್ನೋಡೆನ್‌ಗೆ 2020 ರಲ್ಲಿ ಖಾಯಂ ವಾಸಿಸುವ ಹಕ್ಕುಗಳನ್ನು ನೀಡಿದ್ದರಿಂದ ಅದು ಪೌರತ್ವ ಪಡೆಯಲು ಅವರಿಗೆ ಸುಲಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News