ಭಾರತ, ಪಾಕಿಸ್ತಾನ ಭಿನ್ನ ಮಹತ್ವಗಳನ್ನು ಹೊಂದಿರುವ ಭಾಗೀದಾರರು: ಅಮೆರಿಕ

Update: 2022-09-27 17:28 GMT

ವಾಶಿಂಗ್ಟನ್, ಸೆ. 27: ಭಾರತ ಮತ್ತು ಪಾಕಿಸ್ತಾನಗಳೆರಡೂ ಭಿನ್ನ ಮಹತ್ವಗಳನ್ನು ಹೊಂದಿರುವ ಅಮೆರಿಕದ ಭಾಗೀದಾರರು ಎಂದು ಅಮೆರಿಕ ಸರಕಾರ ಸೋಮವಾರ ಹೇಳಿದೆ. ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ನೀಡುವ ಹಿಂದಿನ ಔಚಿತ್ಯವನ್ನು ಅಮೆರಿಕ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ವ್ಯವಹಾರಗಳ ಎಸ್. ಜೈಶಂಕರ್ ಪ್ರಶ್ನಿಸಿದ ಒಂದು ದಿನದ ಬಳಿಕ ಅಮೆರಿಕ ಈ ಪ್ರತಿಕ್ರಿಯೆ ನೀಡಿದೆ.

ಪಾಕಿಸ್ತಾನಕ್ಕೆ ನೀಡುತ್ತಿರುವ ಎಫ್-16 ನಿರ್ವಹಣಾ ನೆರವು ಭಯೋತ್ಪಾದನೆಯ ವಿರುದ್ಧ ಹೋರಾಡುವುದಕ್ಕಾಗಿ ಎಂಬ ಅಮೆರಿಕದ ವಾದವನ್ನು ಉಲ್ಲೇಖಿಸಿದ ಜೈಶಂಕರ್, ಎಫ್-16 ಯುದ್ಧ ವಿಮಾನಗಳನ್ನು ಎಲ್ಲಿ ಮತ್ತು ಯಾರ ವಿರುದ್ಧ ಬಳಸಲಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದರು. ‘‘ಇಂಥ ವಿಷಯಗಳನ್ನು ಹೇಳಿ ನೀವು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’’ ಎಂದು ಭಾರತೀಯ-ಅಮೆರಿಕನ್ನರೊಂದಿಗಿನ ಸಂವಾದದ ವೇಳೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧ ಮತ್ತು ಇನ್ನೊಂದೆಡೆ ಭಾರತದೊಂದಿಗಿನ ನಮ್ಮ ಸಂಬಂಧವು ಪರಸ್ಪರ ನಂಟು ಹೊಂದಿವೆ ಎಂಬುದಾಗಿ ನಾವು ಪರಿಗಣಿಸುವುದಿಲ್ಲ. ಈ ಎರಡೂ ದೇಶಗಳು ವಿಭಿನ್ನ ಮಹತ್ವಗಳನ್ನು ಹೊಂದಿರುವ ನಮ್ಮ ಭಾಗೀದಾರರು’’ ಎಂದು ಅಮೆರಿಕದ ವಿದೇಶ ಇಲಾಖೆಯ ವಕ್ತಾರ ನೆಡ್ ಪ್ರೈಸ್ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘‘ನಾವು ಈ ಎರಡೂ ದೇಶಗಳನ್ನು ಭಾಗೀದಾರರು ಎಂಬುದಾಗಿ ನೋಡುತ್ತೇವೆ. ಯಾಕೆಂದರೆ, ಹಲವು ವಿಷಯಗಳಲ್ಲಿ ನಾವು ಈ ದೇಶಗಳೊಂದಿಗೆ ಪರಸ್ಪರ ಪೂರಕ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಭಾರತದೊಂದಿಗೆ ನಾವು ಹೊಂದಿರುವ ಸಂಬಂಧಕ್ಕೆ ಅದರದೇ ಆದ ಮಹತ್ವವದಿದೆ. ಅದೇ ರೀತಿ, ಪಾಕಿಸ್ತಾನದೊಂದಿಗೆ ನಾವು ಹೊಂದಿರುವ ಸಂಬಂಧಕ್ಕೂ ಅದರದೇ ಆದ ಮಹತ್ವವಿದೆ’’ ಎಂದು ಅವರು ಹೇಳಿದರು.

ಎಫ್-16 ಯುದ್ಧ ವಿಮಾನಗಳ ನಿರ್ವಹಣೆಗಾಗಿ ಪಾಕಿಸ್ತಾನಕ್ಕೆ 450 ಮಿಲಿಯ ಡಾಲರ್ (ಸುಮಾರು 3,670 ಕೋಟಿ ರೂಪಾಯಿ) ನೆರವು ನೀಡು ನಿರ್ಧಾರವನ್ನು ಅಮೆರಿಕದ ಬೈಡನ್ ಸರಕಾರವು ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು. ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಸಂಘಟನೆಗಳಿಗೆ ಸುರಕ್ಷಿತ ಆಶ್ರಯ ಒದಗಿಸಿರುವುದಕ್ಕಾಗಿ ಹಿಂದಿನ ಟ್ರಂಪ್ ಸರಕಾರವು ಪಾಕಿಸ್ತಾನಕ್ಕೆ ನೀಡುವ ಸೇನಾ ನೆರವನ್ನು ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News