ಬಡವರಿಗೆ ಉಚಿತ ಪಡಿತರ ಯೋಜನೆಯನ್ನು 3 ತಿಂಗಳು ವಿಸ್ತರಿಸಿದ ಕೇಂದ್ರ ಸರಕಾರ

Update: 2022-09-28 17:36 GMT
Photo Credit: PTI

ಹೊಸದಿಲ್ಲಿ, ಸೆ. 28: ಬಡವರಿಗೆ ಉಚಿತ ಪಡಿತರ ಪೂರೈಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯನ್ನು ಕೇಂದ್ರ ಸರಕಾರ ಬುಧವಾರ ಮೂರು ತಿಂಗಳು ವಿಸ್ತರಿಸಿದೆ.

ಈ ಯೋಜನೆ 80 ಕೋಟಿ ಬಡವರಿಗೆ ಪ್ರತಿ ತಿಂಗಳು ತಲಾ 5 ಕಿ.ಗ್ರಾಂ ಗೋದಿ ಹಾಗೂ ಅಕ್ಕಿಯನ್ನು ಉಚಿತವಾಗಿ ಪೂರೈಸುತ್ತದೆ. ಅದು ಶುಕ್ರವಾರ ಅಂತ್ಯಗೊಳ್ಳಲಿದೆ. ಆದರೆ, ಅದನ್ನು 2022 ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ತೊಂದರೆಗೀಡಾದವರಿಗೆ ನೆರವು ನೀಡಲು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಲಾ 5 ಕಿ.ಗ್ರಾಂ. ಆಹಾರ ಧಾನ್ಯ ಪೂರೈಸುವ ಪಿಎಂಜಿಕೆಎವೈ ಯೋಜನೆಯನ್ನು 2020 ಎಪ್ರಿಲ್‌ನಲ್ಲಿ ಆರಂಭಿಸಲಾಗಿತ್ತು.

‘‘ಕೋವಿಡ್‌ನ ವಿರುದ್ಧ ಜಗತ್ತು ಹೋರಾಡುತ್ತಿರುವ ಹಾಗೂ ವಿವಿಧ ಕಾರಣಗಳಿಂದ ಅಭದ್ರತೆ ಇದ್ದ ಸಂದರ್ಭ ಕೈಗೆಟುಕುವ ದರದಲ್ಲಿ ಆಹಾರ ಲಭ್ಯವಾಗಲು ಅಗತ್ಯದ ಕ್ರಮ ತೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರ ದುರ್ಬಲ ವರ್ಗದವರ ಆಹಾರ ಭದ್ರತೆಯನ್ನು ಯಶಸ್ವಿಯಾಗಿ ನಿರ್ವಹಿಸಿತು’’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಜನರು ಸಾಂಕ್ರಾಮಿಕ ರೋಗದ ಸಂಕಷ್ಟದ ಅವಧಿಯನ್ನು ದಾಟಿದ್ದಾರೆ ಎಂದು ಗುರುತಿಸಿರುವ  ಕೇಂದ್ರ ಸರಕಾರ, ಮುಂದೆ ಪ್ರಮುಖ ಹಬ್ಬಗಳು ಬರುವುದರಿಂದ  ಬಡವರು ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ನೆರವಾಗಲು ಪಿಎಂಜಿಕೆಎವೈ ಯೋಜನೆಯನ್ನು ಮೂರು  ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಈ ಯೋಜನೆ ಅಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳಿಗೆ   ಪ್ರತಿ ತಿಂಗಳು 5 ಕಿ.ಗ್ರಾಂ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತದೆ.

2020 ಎಪ್ರಿಲ್‌ನಲ್ಲಿ ಪಿಎಂಜಿಕೆಎವೈ ಯೋಜನೆ ಆರಂಭವಾದಂದಿನಿಂದ ಇಂದಿನ ವರೆಗೆ ಕೇಂದ್ರ ಸರಕಾರ ಅದಕ್ಕಾಗಿ 3.45 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಠಾಕೂರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News