ಸಂಪುಟ ಸಭೆಯಲ್ಲಿ ತನ್ನ ಆಸನದಲ್ಲಿ ದೇವರ ಚಿತ್ರ ಇರಿಸಿದ ಮಧ್ಯಪ್ರದೇಶ ಸಿಎಂ ಚೌಹಾಣ್

Update: 2022-09-28 08:15 GMT
Photo: ndtv.com

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಉಜ್ಜಯನಿ ಭೇಟಿಗೆ ಮುಂಚಿತವಾಗಿ ಮಂಗಳವಾರ ಉಜ್ಜಯನಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan), ತಾವು ಕುಳಿತುಕೊಳ್ಳುವ ಸ್ಥಳದಲ್ಲಿ 'ಮಹಾಕಾಲ್' (Mahakaal) ದೇವರ ಭಾವಚಿತ್ರವನ್ನು ಇರಿಸಿದ್ದರು ಎಂದು ndtv.com ವರದಿ ಮಾಡಿದೆ.

"ಇದು ಮಹಾಕಾಲ್ ಮಹಾರಾಜರ ಸರಕಾರ, ಅವರೇ ಇಲ್ಲಿನ ಅರಸ... ಅವರ ಎಲ್ಲಾ ಸೇವಕರು ಮಹಾಕಾಲ್ ಮಹಾರಾಜ್ ನೆಲದಲ್ಲಿ ಸಭೆಗೆ ಆಗಮಿಸಿದ್ದಾರೆ,'' ಎಂದು ಚೌಹಾಣ್ ಹೇಳಿದರು.

ಉಜ್ಜಯನಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು ಇದೇ ಮೊದಲ ಬಾರಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 11 ರಂದು ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರಿನ ಪ್ರಥಮ ಹಂತವನ್ನು ಉದ್ಘಾಟಿಸಲಿದ್ದಾರೆ. ಈ 900 ಮೀಟರ್ ಕಾರಿಡಾರಿನಲ್ಲಿ ಶಿವ, ಶಕ್ತಿ ಮತ್ತು ಇತರ ದೇವರುಗಳ ಸುಮಾರು 200 ಪ್ರತಿಮೆಗಳಿರಲಿವೆ. ಮೊದಲ ಹಂತದ 351 ಕೋಟಿ ರೂ. ಮೊತ್ತದ ಕಾಮಗಾರಿ ಅಕ್ಟೋಬರ್ 11 ರಂದು ಉದ್ಘಾಟನೆಯಾಗುವ ದಿನ ಉಜ್ಜಯನಿಯಲ್ಲಿ ರಜೆ ಘೋಷಿಸಲಾಗಿದೆ. ರಾಜ್ಯ ಸಚಿವ ಸಂಪುಟವು ಹೊಸ ಸಂಕೀರ್ಣವನ್ನು 'ಮಹಾಕಾಳ್ ಲೋಕ್' ಎಂದು ಹೆಸರಿಸಲು ನಿರ್ಧರಿಸಿದೆ.

ಈ ಕಾಮಗಾರಿಗೆ 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಟೆಂಡರ್ ಆಹ್ವಾನಿಸಲಾಗಿತ್ತಾದರೂ  ನಂತರ ಬೇರೆ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಕಾಮಗಾರಿ ಮುಂದುವರಿಯಲಿಲ್ಲ ಎಂದು ಚೌಹಾಣ್ ಹೇಳಿದರು.

ಚೌಹಾಣ್ ಆರೋಪವನ್ನು ತಿರಸ್ಕರಿಸಿದ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂ ಕಮಲ್ ನಾಥ್, ಮಹಾಕಾಲ್ ಅಭಿವೃದ್ಧಿ ಯೋಜನೆಯನ್ನು ತಮ್ಮ ಸರಕಾರ ಪ್ರಸ್ತಾಪಿಸಿತ್ತು ಎಂದಿದ್ದಾರೆ.

ಇದನ್ನೂ ಓದಿ: ಪಿಎಫ್ ಐ ಮಾತ್ರವೇಕೆ, ಆರೆಸ್ಸೆಸ್ ಅನ್ನು ಕೂಡ ನಿಷೇಧಿಸಬೇಕು: ಕಾಂಗ್ರೆಸ್ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News