ಭಟ್ಕಳ: ಪಿಎಫ್ಐ ಜಿಲ್ಲಾ ಪದಾಧಿಕಾರಿಗಳ ಮನೆ ಮೇಲೆ ಅಧಿಕಾರಿಗಳಿಂದ ದಾಳಿ; ದಾಖಲೆ ಪರಿಶೀಲನೆ

Update: 2022-09-28 16:50 GMT

ಭಟ್ಕಳ: ನಿಷೇಧಿತ ಪಿ.ಎಫ್.ಐ. ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಮನೆಗಳ ಮೇಲೆ ಇಂದು ಸಂಜೆ ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಿ ಮನೆಯಲ್ಲಿದ್ದ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಯಿತು.

ಪಿ.ಎಫ್.ಐ. ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ಅವರ ಮನೆಗೆ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್., ಗ್ರಾಮಾಂತರ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ದಾಳಿಯ ಸಮಯದಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿದ್ದ ಸದಸ್ಯರಲ್ಲಿ ಮಾಹಿತಿಯನ್ನು ಪಡೆದ ಅಧಿಕಾರಿಗಳು ಮನೆಯಲ್ಲಿದ್ದ ದಾಖಲೆಗಳು, ಹಲವಾರು ಪುಸ್ತಕಗಳು, ಇತರ ಪರಿಕರಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಉಪಾಧೀಕ್ಷಕ ಕೆ.ಯು. ಬೆಳ್ಳಿಯಪ್ಪ ಹಾಗೂ ತಹಶೀಲ್ದಾರ್ ಡಾ. ಸುಮಂತ್ ಬಿ.ಇ. ಅವರ ತಂಡವು ಪ್ರಧಾನ ಕಾರ್ಯದರ್ಶಿ ಮಕ್ಸೂದ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದು ದಾಳಿಯ ವೇಳೆಯಲ್ಲಿ ಮಕ್ಸೂದ್ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಇಲ್ಲಿಯೂ ಕೂಡಾ ಮನೆಯಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ದಾಳಿಯಲ್ಲಿ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಚ್.ಬಿ. ಕಡಗುಂಟಿ, ಬಿ. ಸುಮಾ, ಭರತ್‌ ಕುಮಾರ್, ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News