ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

Update: 2022-09-29 04:42 GMT

ಕಾಸರಗೋಡು, ಸೆ.29: ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಬುಧವಾರ ಸಂಜೆ ಪಯಸ್ವಿನಿ ಬೇಡಡ್ಕ ಕರಿಚ್ಚೇರಿ ಹೊಳೆಯಲ್ಲಿ ನಡೆದಿದೆ.

ಕೊಲ್ಲಂ ನಿವಾಸಿ ವಿ.ವಿಜಿತ್(23) ಮತ್ತು ತಿರುವನಂತಪುರ ನಿವಾಸಿ ಆರ್.ರಂಜು(24) ಮೃತಪಟ್ಟ ಯುವಕರಾಗಿದ್ದಾರೆ. ಇವರಿಬ್ಬರ ಮೃತದೇಹಗಳು ರಾತ್ರಿ ವೇಳೆ ಪತ್ತೆಯಾಗಿವೆ.
ಇವರಿಬ್ಬರು ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೇಡಡ್ಕ ಮುನಂಬ್ ತೂಗು ಸೇತುವೆ ಬಳಿ ಹೊಳೆಗೆ ಸ್ನಾನಕ್ಕೆಂದು ಸ್ನೇಹಿತರ ಜೊತೆ ಇಳಿದಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರು ಆಕಸ್ಮಿಕವಾಗಿ ಮುಳುಗಿದ್ದಾರೆನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಪರಿಸರವಾಸಿಗಳು ಶೋಧ ನಡೆಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ವಿಜಿತ್ ಮೃತದೇಹ ತೂಗುಸೇತುವೆ ಬಳಿ ಹಾಗೂ ರಂಜು ಮೃತದೇಹ ಘಟನೆ ನಡೆದ ಅಲ್ ದೂರದಲ್ಲಿ ಕಂಡುಬಂದಿದೆ. ಬೇಡಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.
ಚೆನ್ನೈ ನ ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದ ಇವರಿಬ್ಬರೂ ಇದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮುನಂಬ್ ನ ಸಹದ್ಯೋಗಿ ವಿಷ್ಣು  ಎಂಬವರ ಮನೆಗೆ  ಆಗಮಿಸಿದ್ದರು .
ಸೆ.25ರಂದು ಸ್ನೇಹಿತರ ಜೊತೆ  ಗೋವಾಕ್ಕೆ ತೆರಳಿ  ಬುಧವಾರ ರಾಣಿಪುರಕ್ಕೆ ಆಗಮಿಸಿದ್ದು, ಸಂಜೆ ಮೂರು ಗಂಟೆಗೆ ಮುನಂಬ್ ನಲ್ಲಿರುವ ವಿಷ್ಣು ಮನೆಗೆ ಬಂದಿದ್ದರು. ರಾತ್ರಿ ಇವರು ರೈಲಿನಲ್ಲಿ ಊರಿಗೆ ಮರಳುವವರಿದ್ದರೆನ್ನಲಾಗಿದೆ.

ಈ ನಡುವೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಇವರು ಮುನಂಬ್ ನಲ್ಲಿರುವ ತೂಗು ಸೇತುವೆ ಬಳಿಗೆ ಆಗಮಿಸಿದ್ದಾರೆ. ವಿಜಿತ್, ರಂಜು ಸೇರಿದಂತೆ ನಾಲ್ವರು ಸ್ನಾನಕ್ಕೆಂದು ಹೊಳೆಗೆ ಇಳಿದಿದ್ದರು. ಈ ಸಂದರ್ಭ ಇಬ್ಬರು ನೀರುಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ದುರಂತದ ಸುದ್ದಿ ತಿಳಿದು ಮೃತರ ಸಂಬಂಧಿಕರು ಕಾಸರಗೋಡಿಗೆ ಆಗಮಿಸಿದ್ದು, ಮಧ್ಯಾಹ್ನದ ವೇಳೆಗೆ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆ, ಕರುಳಿನಿಂದ 63 ಚಮಚ ಹೊರತೆಗೆದ ವೈದ್ಯರು !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News