ಗಲಭೆ ಪ್ರಕರಣ: ಜೈಲು ಪಾಲಾದ 2 ಗಂಟೆಗಳಲ್ಲಿ ಜಾಮೀನು ಪಡೆದ ಉತ್ತರಪ್ರದೇಶ ಸಚಿವ ಅಗರ್ವಾಲ್, ಬಿಜೆಪಿ ಶಾಸಕ ಸೈನಿ

Update: 2022-09-29 09:38 GMT
Kapil Dev Aggarwal, Photo:twitter

ಮುಝಾಫರ್‌ನಗರ: ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣ ಹಾಗೂ  ಕೌಶಲ್ಯಾಭಿವೃದ್ಧಿ (ಸ್ವತಂತ್ರ ಉಸ್ತುವಾರಿ) ಕಿರಿಯ ಸಚಿವ ಕಪಿಲ್ ದೇವ್ ಅಗರ್ವಾಲ್, ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ, ಹಿಂದುತ್ವ ಪ್ರತಿಪಾದಕಿ ಸಾಧ್ವಿ ಪ್ರಾಚಿ ಸೇರಿದಂತೆ ಹಲವರು ಮಂಗಳವಾರ 2013ಕ್ಕೆ ಸಂಬಂಧಿಸಿದ ಮುಝಾಫರ್‌ನಗರ ಗಲಭೆ ಪ್ರಕರಣದಲ್ಲಿ ಜೈಲು ಪಾಲಾದ ಎರಡೇ ಗಂಟೆಯಲ್ಲಿ ಜಾಮೀನು ಪಡೆದಿದ್ದಾರೆ.

ಆರೋಪಿಗಳು ಆಗಸ್ಟ್ 31, 2013 ರಂದು ನಾಗಲಾ ಮಂಡೌರ್‌ನಲ್ಲಿ ಅನುಮತಿಯಿಲ್ಲದೆ ಪಂಚಾಯತಿ ನಡೆಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು. ಇದು ಕೋಮು ಹಿಂಸಾಚಾರವನ್ನು ಪ್ರಚೋದಿಸಿತ್ತು. ಹಿಂಸಾಚಾರದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದರು ಮತ್ತು ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ನೀಡಿತ್ತು. ನಂತರ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು. ಆದಾಗ್ಯೂ, ಆರೋಪಿಗಳು ನ್ಯಾಯಾಲಯದ  ಮುಂದೆ ಹಾಜರಾಗಲು ವಿಫಲರಾಗಿದ್ದರು. ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

ಮಂಗಳವಾರ ಆರೋಪಿಗಳು ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿದ್ದು, ಮುಝಾಫರ್‌ನಗರದ ನ್ಯಾಯಾಲಯವಿ  ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಎರಡು ಗಂಟೆಗಳ ಕಾಲ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ನೀಡಲಾಯಿತು.

ಜಾಮೀನು ಪಡೆದ ನಂತರ ಸಚಿವ ಅಗರ್ವಾಲ್ ಅವರು ಅಖಿಲೇಶ್ ಯಾದವ್ ನೇತೃತ್ವದ ಈ ಹಿಂದಿನ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು, "ಅವರು ನಮ್ಮ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.  ಗಲಭೆಗಳು ಅವರ ಸರಕಾರದ ವೈಫಲ್ಯ ಹಾಗೂ ಅದನ್ನು ಮುಚ್ಚಿಹಾಕಲು ಅವರು ಬಿಜೆಪಿ ಸದಸ್ಯರನ್ನು ಬಂಧಿಸಿದ್ದಾರೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News