ಗರ್ಬಾ ನೃತ್ಯ ಸ್ಥಳಗಳಿಗೆ ಪ್ರವೇಶಿಸಲೆತ್ನಿಸಿದ ಮುಸ್ಲಿಂ ಯುವಕರಿಗೆ ಹಲ್ಲೆಗೈದ ಬಜರಂಗದಳ ಕಾರ್ಯಕರ್ತರು: ಆರೋಪ

Update: 2022-09-29 11:25 GMT

ಅಹ್ಮದಾಬಾದ್: ಅಹ್ಮದಾಬಾದ್‍ನಲ್ಲಿ (Ahmedabad) ಗರ್ಬಾ (garba) ನೃತ್ಯ ಸ್ಥಳಗಳಿಗೆ ಪ್ರವೇಶಿಸಲು ಯತ್ನಿಸಿದ್ದರೆಂದು ಮುಸ್ಲಿಂ ಯುವಕರಿಗೆ ಬಜರಂಗದಳ(Bajrang Dal) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೆಲ ಯುವಕರ ಬಳಿ ಅವರ ಧರ್ಮದ ಕುರಿತು ಪ್ರಶ್ನಿಸುತ್ತಿರುವುದು ಹಾಗೂ ಅವರಿಗೆ ಕೇಸರಿ ಪಡೆ ಹಲ್ಲೆ ನಡೆಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು deccanherald.com ವರದಿ ಮಾಡಿದೆ.

ಒಂದು ವೀಡಿಯೋದಲ್ಲಿ ಒಬ್ಬ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಆತನಿಗೆ ಕೇಸರಿ ಶಾಲು ಧರಿಸಿದ್ದ ಅರ್ಧ ಡಜನ್ ಮಂದಿ ವಾಹನ ದಟ್ಟಣೆಯ ರಸ್ತೆಯಲ್ಲಿಯೇ ತುಳಿಯುತ್ತಿರುವುದು ಕಾಣಿಸುತ್ತದೆ. ಸಂತ್ರಸ್ತನೆಂದು ಗುರುತಿಸಲಾದ ಸಲ್ಮಾನ್ ಶೇಖ್ ಎಂಬಾತ, "ನನ್ನನ್ನು ಬಿಟ್ಟು ಬಿಡಿ ಇನ್ನು ಇಲ್ಲಿಗೆ ಬರುವುದಿಲ್ಲ" ಎಂದು ಅಂಗಲಾಚುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಈ ವೀಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಹ್ಮದಾಬಾದ್‍ನ ಸಿಂಧು ಭವನ ರಸ್ತೆಯಲ್ಲಿನ ಆರ್ ಕೆ ಪಾರ್ಟಿ ಪ್ಲಾಟ್‍ನಲ್ಲಿ ಗರ್ಬಾ ನೃತ್ಯ ನಡೆಯುವ ಸ್ಥಳಗಳಿಂದ ಹಿಂದೂಯೇತರರನ್ನು ದೂರವಿಡುವ ನಿಟ್ಟಿನಲ್ಲಿ ಅಲ್ಲಿಗೆ ಬರುತ್ತಿರುವವರ ಗುರುತುಗಳನ್ನು ಪರಿಶೀಲಿಸುತ್ತಿರುವಾಗ ಈ ಘಟನೆ ನಡೆದಿದೆ. ಗರ್ಬಾ ನೃತ್ಯ ನಡೆಯುವ ಸ್ಥಳಗಳಿಂದ ದೂರವಿರುವಂತೆ ಬಜರಂಗದಳ ಕಾರ್ಯಕರ್ತರು ಹಿಂದೂಯೇತರರನ್ನು ಪ್ರತಿ ವರ್ಷ ನವರಾತ್ರಿ ಆಚರಣೆ ಸಂದರ್ಭ ಎಚ್ಚರಿಸುತ್ತಲೇ ಬಂದಿದ್ದಾರೆ ಎಂದು deccanherald.com ವರದಿ ಮಾಡಿದೆ.

ಹಿಂದೂಯೇತರರು ಗರ್ಬಾ ನೃತ್ಯ ಸ್ಥಳಗಳಿಗೆ ಹೋಗುವುದು 'ಲವ್ ಜಿಹಾದ್' ಅಲ್ಲದೆ ಬೇರಿನ್ನೇನಲ್ಲ ಎಂದು ಕೇಸರಿ ಪಡೆ ವಾದಿಸುತ್ತಿದೆ. ಹಿಂದೂಯೇತರರಿಗೆ ಗರ್ಬಾ ಕಾರ್ಯಕ್ರಮಗಳಿಗೆ ಪ್ರವೇಶ ನೀಡಬಾರದೆಂದು ಸಂಘಟನೆಗಳು ಜಿಲ್ಲಾಡಳಿತಗಳಿಗೆ ಮನವಿ ಕೂಡ ಮಾಡಿವೆ ಎನ್ನಲಾಗಿದೆ.

ಆರ್‍ಕೆ ಪಾರ್ಟಿ ಪ್ಲಾಟ್ ಮಾಲಕ ನೀರವ್ ಪಟೇಲ್ ಪ್ರತಿಕ್ರಿಯಿಸಿ, ತಾನು ಸ್ಥಳವನ್ನು ಸ್ಕೈ ಈವೆಂಟ್ಸ್ ಎಂಬ ಸಂಸ್ಥೆಗೆ ಬಾಡಿಗೆ ನೀಡಿದ್ದು ಘಟನೆ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಸ್ಕೈ ಈವೆಂಟ್ಸ್ ಆಯೋಜಕ ವೇದಿಕ್ ಶಾ ಮಾತನಾಡಿ ಮಂಗಳವಾರ ರಾತ್ರಿ ನಡೆದ ಕೆಲ ಅಹಿತಕರ ಘಟನೆ ಬಗ್ಗೆ ತಿಳಿದು ಬಂದಿದೆ ಆದರೆ ತಮ್ಮ ಕಾರ್ಯಕ್ರಮದಲ್ಲಿ ನಡೆದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಟಿ-20 ವಿಶ್ವಕಪ್ ನಿಂದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಹೊರಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News