ಆರೋಪಿಗಳು ಮಹಿಳೆ, ಅಪ್ರಾಪ್ತರು, ಅಸೌಖ್ಯಪೀಡಿತರಾಗಿದ್ದರೆ ಜಾಮೀನು ಷರತ್ತುಗಳನ್ನು ಸಡಿಲಗೊಳಿಸುವ ಅಗತ್ಯವಿದೆ: ಹೈಕೋರ್ಟ್

Update: 2022-09-29 10:59 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿಯ ಆರೋಪಿಗಳು ಮಹಿಳೆಯಾಗಿದ್ದರೆ, ಅಸೌಖ್ಯಪೀಡಿತನಾಗಿದ್ದರೆ, ಮಾನಸಿಕವಾಗಿ ಅಥವಾ ದೈಹಿಕವಾಗಿ ಅಶಕ್ತನಾಗಿದ್ದರೆ ಅಥವಾ 16 ವರ್ಷಕ್ಕಿಂತ ಕೆಳಗಿನವರಾಗಿದ್ದರೆ ಅವರಿಗೆ ಈ ಕಾಯಿದೆಯಡಿಯ ಕಠಿಣ ಜಾಮೀನು ಷರತ್ತುಗಳನ್ನು (Bail Conditions) ಸಡಿಲಗೊಳಿಸುವ ಅಗತ್ಯವಿದೆ ಎಂದು ದಿಲ್ಲಿ ಹೈಕೋರ್ಟ್ (Delhi HC) ತನ್ನ ಇತ್ತೀಚಿಗಿನ ಆದೇಶವೊಂದರಲ್ಲಿ ಹೇಳಿದೆ.

ಈ ಕಾಯಿದೆಯ ಸೆಕ್ಷನ್ 45 ಅಡಿಯಲ್ಲಿ ಜಾಮೀನು ದೊರೆಯಬೇಕಾದರೆ ಎರಡು ಷರತ್ತುಗಳನ್ನಿಡಲಾಗಿವೆ- ಆತ ಅಥವಾ ಆಕೆ ಈ ಅಪರಾಧವೆಸಗಿಲ್ಲ ಎಂದು ನಂಬಲು ಸಾಕಷ್ಟು ವಿಶ್ವಾಸಾರ್ಹ ಕಾರಣಗಳಿವೆ ಹಾಗೂ ಆತ, ಆಕೆ ಜಾಮೀನಿನ ಮೇಲಿರುವಾಗ ಯಾವುದೇ ಅಪರಾಧವೆಸಗುವುದಿಲ್ಲ ಎಂಬುದು ನ್ಯಾಯಾಲಯಕ್ಕೆ ದೃಢಗೊಳ್ಳಬೇಕಿದೆ.

ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್‍ಗೆ ಸಂಬಂಧಿಸಿದ ರೂ. 3,269 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಆರೋಪಿ ದೇವಕಿ ನದ್ನನ್ ಗರ್ಗ್ ಅವರ ಜಾಮೀನು ಅರ್ಜಿ ಪರಿಗಣಿಸುವ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ. ಈ ಪ್ರಕರಣದಲ್ಲಿ ಗರ್ಗ್ ಹೊರತಾಗಿ ಅಶೋಕ್ ಕುಮಾರ್ ಗೋಯೆಲ್ ಎಂಬಾತನನ್ನು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು.

ತಮ್ಮ ಕಕ್ಷಿಗಾರರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಅವರನ್ನು ಜಾಮೀನು ನೀಡಲು ಅಗತ್ಯವಿರುವ ಎರಡು ಷರತ್ತುಗಳಿಂದ ವಿನಾಯಿತಿ ನೀಡಬೇಕು. ಅವರು ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ, ಕಸ್ಟಡಿಯಲ್ಲಿರುವಾಗ ಅವರಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ಸಾಧ್ಯವಾಗದು ಎಂದು ಗರ್ಗ್ ಪರ ವಕೀಲರು ವಾದಿಸಿದ್ದರು.

ಈ ಪ್ರಕರಣದ ಇತರ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿಯೇ ಇದ್ದರೂ ಗರ್ಗ್ ಅವರಿಗೆ ಈ ಹಿಂದೆ ಕೂಡ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಒದಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News