ಚಾಂತಾರು ತ್ಯಾಜ್ಯ ಘಟಕ ವಿರೋಧಿಸಿ ಗ್ರಾಮಸ್ಥರಿಂದ ಗ್ರಾಪಂಗೆ ಮುತ್ತಿಗೆ

Update: 2022-09-29 13:36 GMT

ಬ್ರಹ್ಮಾವರ, ಸೆ.29: ಚಾಂತಾರು ಗ್ರಾಮದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸುಮಾರು 11 ಎಕರೆ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಗುರುವಾರ ಮೆರವಣಿಗೆ ನಡೆಸಿ ಚಾಂತಾರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹೇರೂರು ಶಾಲೆಯಿಂದ ಆರಂಭಗೊಂಡ ಮೆರವಣಿಗೆಯ ಮೂಲಕ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿದ ಪ್ರತಿಭಟನಕಾರರು ಸಂಬಂಧಪಟ್ಟ ವರಿಗೆ ಮನವಿ ಸಲ್ಲಿಸಿದರು. ಬಳಿಕ ಅಲ್ಲಿಂದ ಚಾಂತಾರು ಗ್ರಾಪಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷ ಸಭೆ ಕರೆದು ತ್ಯಾಜ್ಯ ಘಟಕ ನಿರ್ಮಾಣ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿ ಗ್ರಾಪಂ ಅಧ್ಯಕ್ಷೆ ಬೇಬಿ ಪೂಜಾರಿ ಹಾಗೂ ಪಿಡಿಓ ಸತೀಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸ ಲಾಯಿತು.

ಗ್ರಾಮದ ಸುಮಾರು 11 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಲು ಪಂಚಾಯತ್ ಮುಂದಾಗಿದ್ದು, ಈ ಪರಿಸರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ೨೦೦ ಮೀಟರ್ ಅಂತರದಲ್ಲಿ ಮಡಿನಾರು ಹೊಳೆ ಇದ್ದು ಸಾಕಷ್ಟು ವಾಸದ ಮನೆಗಳಿವೆ. ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಜನರಿಗೆ ಮತ್ತು ಪರಸರಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಪರಿಸರ ಹದಗೆಡುವುದರ ಜೊತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಜ್ಞಾನ ವಸಂತ ಶೆಟ್ಟಿ, 11 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಈ ಹಿಂದೆಯೂ ಪಂಚಾಯತ್ ವ್ಯಾಪ್ತಿಯ ಮತ್ತು ಸುತ್ತಮುತ್ತ ಪರಿಸರದ ಜನರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಪಂ ಕಾರ್ಯ ನಿರ್ವಹಣಾಧಿಕಾರಿ, ತಾಪಂಗೆ ಮನವಿ ಸಲ್ಲಿಸಿ ದ್ದೇವೆ. ಇದಕ್ಕೂ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು. ಈ ತ್ಯಾಜ್ಯ ಘಟಕದ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಜ್ಞಾನ ವಸಂತ ಶೆಟ್ಟಿ, ತ್ಯಾಜ್ಯ ಹೋರಾಟ ಸಮಿತಿಯ ಸಂಚಾಲಕ ಸತೀಶ್ ಪೂಜಾರಿ, ಉಪ ಸಂಚಾಲಕ ಥೋಮಸ್ ಆಡಿಸನ್ ವಾಜ್, ಕೋಶಾಧಿಕಾರಿ ಪ್ರಭಾಕರ್ ಥಿಮ್ಸನ್, ಸಂತೋಷ್ ಜತ್ತನ್ನ, ಎನ್ಸಿಲ್ ಡಿಸೋಜ, ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News