ʼಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳು ಕಡ್ಡಾಯʼ ನಿಯಮ ಜಾರಿ ಒಂದು ವರ್ಷ ಮುಂದೂಡಿಕೆ

Update: 2022-09-29 18:47 GMT

ಹೊಸದಿಲ್ಲಿ,ಸೆ.29: ಭಾರತದಲ್ಲಿ ಪ್ರಯಾಣಿಕ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ಸುರಕ್ಷಾ ನಿಯಮದ ಜಾರಿಯನ್ನು ಮುಂದಿನ ವರ್ಷದ ಅಕ್ಟೋಬರ್‌ಗೆ ಮುಂದೂಡಲು ಕೇಂದ್ರ ಸರಕಾರವು ನಿರ್ಧರಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಗುರುವಾರ ಪ್ರಕಟಿಸಿದ್ದಾರೆ. ನಿಯಮವು 2023,ಅ.1ರಿಂದ ಜಾರಿಗೊಳ್ಳಲಿದೆ.

ಹೆಚ್ಚಿನ ಸುರಕ್ಷತೆಗಾಗಿ ಎಂಟು ಆಸನಗಳನ್ನು ಹೊಂದಿರುವ ಎಲ್ಲ ವಾಹನಗಳಲ್ಲಿ ಆರು ಏರ್ ಬ್ಯಾಗ್‌ಗಳನ್ನು 2022,ಅ.1ರಿಂದ ಕಡ್ಡಾಯಗೊಳಿಸಲು ಸರಕಾರವು ಈ ಮೊದಲು ಉದ್ದೇಶಿಸಿತ್ತು.

‘ವಾಹನ ತಯಾರಿಕೆ ಕ್ಷೇತ್ರವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಮತ್ತು ಸ್ಥೂಲ ಆರ್ಥಿಕತೆಯ ಮೇಲೆ ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಎಂಟು ಆಸನಗಳ ಪ್ರಯಾಣಿಕ ಕಾರುಗಳು ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವನ್ನು 2023,ಅ.1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ ’ ಎಂದು ಗಡ್ಕರಿ ಟ್ವೀಟಿಸಿದ್ದಾರೆ.ವಾಹನಗಳ ವೆಚ್ಚ ಮತ್ತು ವೈವಿಧ್ಯಗಳು ಏನೇ ಆಗಿರಲಿ,ಅವುಗಳಲ್ಲಿ ಪ್ರಯಾಣಿಸುವ ಜನರ ಸುರಕ್ಷತೆ ಅತ್ಯಂತ ಹೆಚ್ಚಿನ ಆದ್ಯತೆಯಾಗಿದೆ ಎಂದೂ ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News