ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ವಿಶೇಷ ತನಿಖೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಗೆ ಬಾಂಬೆ ಹೈಕೋರ್ಟ್ ತಿರಸ್ಕಾರ

Update: 2022-09-29 15:39 GMT

ಮುಂಬೈ,ಸೆ.29: 2013ರ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಅವರ ತಾಯಿ ರಬಿಯಾ ಖಾನ್ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ಪ್ರಕರಣದಲ್ಲಿ ರಬಿಯಾ ಖಾನ್ ಅನುಸರಿಸಿದ ಮಾರ್ಗವನ್ನು ಕಟುವಾಗಿ ಟೀಕಿಸಿದ ನ್ಯಾಯಾಲಯವು,‘ಅರ್ಜಿಯಲ್ಲಿ ಹೇಳಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ದಂಡ ವಿಧಿಸಲು ನಾವು ಬಯಸಿದ್ದೆವು,ಆದರೆ ಅರ್ಜಿದಾರರ ಪರ ವಕೀಲರ ಕೋರಿಕೆಯಂತೆ ನಾವು ಅದಕ್ಕೆ ಮುಂದಾಗಿಲ್ಲ. ಅದರಂತೆ ಕ್ರಿಮಿನಲ್ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ ’ಎಂದು ಹೇಳಿತು.

ಪ್ರಕರಣದಲ್ಲಿ ಸಿಬಿಐ ನಡೆಸಿರುವ ಹೆಚ್ಚಿನ ತನಿಖೆಯು ನ್ಯಾಯಾಲಯಕ್ಕೆ ತೃಪ್ತಿಯನ್ನು ನೀಡಿದೆ ಎಂದು ಹೇಳಿದ ಹೈಕೋರ್ಟ್,ಅರ್ಜಿದಾರರ ನಡವಳಿಕೆಯನ್ನೂ ಪ್ರಶ್ನಿಸಿತು.
ಅರ್ಜಿದಾರರ ನಡವಳಿಕೆಯು ಆಗಿನ್ನೂ ಆರಂಭಗೊಳ್ಳಬೇಕಿದ್ದ ವಿಚಾರಣೆಯ ಅನಗತ್ಯ ವಿಳಂಬಕ್ಕೆ ಕಾರಣವಾಗಿತ್ತು ಮತ್ತು ತ್ವರಿತ ನ್ಯಾಯವು ಆರೋಪಿ ಮತ್ತು ಬಲಿಪಶು ಇಬ್ಬರದೂ ಸಾಂವಿಧಾನಿಕ ಹಕ್ಕು ಆಗಿದೆ ಎಂದು ಹೇಳಿತು.‘ಅರ್ಜಿದಾರರು ನಮ್ಮ ದೇಶದ ನ್ಯಾಯವ್ಯವಸ್ಥೆ ಮತ್ತು ತನಿಖಾ ಸಂಸ್ಥೆಯಲ್ಲಿ ತನ್ನ ಸಂದೇಹವನ್ನು ಬಹಿರಂಗವಾಗಿ ವ್ಯಕ್ತಗೊಳಿಸಿದ್ದಾರೆ. ಹೀಗಾಗಿ ಇದನ್ನು ಎದುರಿಸುವುದು ಅಗತ್ಯವಾಗಿದೆ ’ಎಂದು ನ್ಯಾಯಾಲಯವು ಅಭಿಪ್ರಾಯಿಸಿತು.ಪ್ರಕರಣದಲ್ಲಿ ಅರ್ಜಿದಾರರು ಸಂಪರ್ಕಿಸಿದ್ದ ಬ್ರಿಟನ್‌ನ ಕಾನೂನು ಸಂಸ್ಥೆ ಸ್ಕಾರ್‌ಮನ್ಸ್  ಮತ್ತು ಅದು ಪ್ರಕಟಿಸಿದ್ದ ವರದಿಯನ್ನೂ ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News