ಭಾರತದಲ್ಲಿ ಭಯೋತ್ಪಾದಕರ ದಾಳಿ ಬಗ್ಗೆ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಕೆನಡಾ

Update: 2022-09-29 17:50 GMT

ಒಟ್ಟಾವ, ಸೆ. 29: ಭಯೋತ್ಪಾದಕರ ದಾಳಿಯ ಬೆದರಿಕೆ ಇರುವುದರಿಂದ ಭಾರತಕ್ಕೆ ಪ್ರಯಾಣಿಸುವ ಸಂದರ್ಭ ತೀವ್ರ ಎಚ್ಚರಿಕೆ ವಹಿಸುವಂತೆ ಕೆನಡಾ ಬುಧವಾರ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ದ್ವೇಷಾಪರಾಧ ಹಾಗೂ ಭಾರತ ವಿರೋಧಿ ಚಟುವಟಿಕೆಗಳು ತೀವ್ರ ಏರುತ್ತಿರುವ ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಾಸಿಸುತ್ತಿರುವ ಹಾಗೂ ಕೆನಡಾಕ್ಕೆ ಪ್ರಯಾಣಿಸುತ್ತಿರುವ ಭಾರತೀಯರಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವಾರ ಎಚ್ಚರಿಕೆ ನೀಡಿತ್ತು. ಇದಾದ ದಿನಗಳ ಬಳಿಕ ಕೆನಡಾ ಈ ಎಚ್ಚರಿಕೆ ನೀಡಿದೆ.

ಅನಿರೀಕ್ಷಿತ ಭದ್ರತಾ ಪರಿಸ್ಥಿತಿ, ನೆಲಬಾಂಬ್‌ಗಳು ಹಾಗೂ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳು ಇರುವುದರಿಂದ ಪಾಕಿಸ್ತಾನ ಗಡಿಯ ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್‌ನಂತಹ ರಾಜ್ಯಗಳಿಗೆ ಪ್ರಯಾಣಿಸದಂತೆ ಕೆನಡಾ ಬುಧವಾರ ತನ್ನ ಪ್ರಜೆಗಳಿಗೆ ಪರಿಷ್ಕೃತ ಪ್ರಯಾಣ ಸಲಹೆ ನೀಡಿದೆ.

ದಂಗೆ ಹಾಗೂ ಭಯೋತ್ಪಾದನೆಯ ಭೀತಿ ಇರುವುದರಿಂದ ಅಸ್ಸಾಂ, ಮಣಿಪುರ, ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರಯಾಣಿಸದಂತೆ ಕೂಡ ಕೆನಡಾ ತನ್ನ ಪ್ರಜೆಗಳಿಗೆ ಸೂಚಿಸಿದೆ. ಒಂಟಾರಿಯೊದಲ್ಲಿ ಸೆಪ್ಟಂಬರ್ 19ರಂದು ‘‘ಖಲಿಸ್ತಾನ ಜನಾಭಿಪ್ರಾಯ ಸಂಗ್ರಹ’’ ನಡೆಯಲು ಅವಕಾಶ ನೀಡಿರುವ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಕೆನಡಾದ ಅಧಿಕಾರಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಅನಂತರ ಸೆಪ್ಟಂಬರ್ 23ರಂದು ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿತ್ತು.

ಭಾರತದಿಂದ ಹೊರಬಂದು ಸಿಕ್ಖರಿಗಾಗಿ ಪ್ರತ್ಯೇಕ ದೇಶ ರೂಪಿಸುವ ಗುರಿ ಹೊಂದಿರುವ ನಿಷೇಧಿತ ‘ಸಿಖ್ ಪಾರ್ ಜಸ್ಟಿಸ್ ಗ್ರೂಪ್’ ಆಯೋಜಿಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಕೆನಡಾದಲ್ಲಿರುವ ಹಲವು ಸಿಕ್ಖರು ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News