ವೈವಾಹಿಕ ಅತ್ಯಾಚಾರ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Update: 2022-09-30 02:22 GMT

ಹೊಸದಿಲ್ಲಿ: ಗರ್ಭಪಾತದ ಉದ್ದೇಶಕ್ಕಾಗಿಯೇ ಅನಗತ್ಯ ಗರ್ಭಧಾರಣೆಗೆ ಕಾರಣವಾಗುವ ವೈವಾಹಿಕ ಅತ್ಯಾಚಾರ ಎಂಬ ಪರಿಕಲ್ಪನೆಯನ್ನು ಸುಪ್ರೀಂಕೋರ್ಟ್ ಗುರುವಾರ ಪರಿಗಣಿಸಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಯಲ್ಲಿ ಪತಿ ತನ್ನ ಪತ್ನಿಯ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಕೂಡಾ ಸೇರುತ್ತದೆ ಎಂಬ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಭಾರತೀಯ ಡಂಡ ಸಂಹಿತೆಯಡಿ ವೈವಾಹಿಕ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸಲು ಅವಕಾಶ ಇದ್ದು, ಇದನ್ನು ಪ್ರಶ್ನಿಸಿರುವ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಬಾಕಿ ಇದ್ದರೂ, ಇದನ್ನು ವೈದ್ಯಕೀಯ ಗರ್ಭಪಾತ ಕಾಯ್ದೆಯಂಥ ಸಿವಿಲ್ ಕಾನೂನಿನಲ್ಲಿ ಅನ್ವಯಿಸಲು ಇಂದಿನ ತೀರ್ಪು ಅವಕಾಶ ಕಲ್ಪಿಸಲಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎ.ಎಸ್.ಬೋಪಣ್ಣ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಸುಪ್ರೀಂಕೋರ್ಟ್ ಪೀಠ, "ವಿವಾಹಿತ ಮಹಿಳೆ ತನ್ನ ಪತಿಯ ಅತ್ಯಾಚಾರದಿಂದ ಗರ್ಭಿಣಿಯಾದ ಸಂದರ್ಭದಲ್ಲಿ ಅದು ಅನಪೇಕ್ಷಿತ ಗರ್ಭಧಾರಣೆ ಎಂದು ಭಾವಿಸದಿರಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಗರ್ಭಿಣಿ ಮಹಿಳೆಯ ದೈಹಿಕ ಮತ್ತು ನಿರ್ಧಾರಾತ್ಮಕ ಸ್ವಾಯತ್ತತೆಯನ್ನು ನ್ಯಾಯಪೀಠ ಒತ್ತಿ ಹೇಳಿದೆ.

ವಿವಾಹಿತ ಮಹಿಳೆ ಕೂಡಾ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ಸಂತ್ರಸ್ತೆಯ ವರ್ಗ ಸೇರಬಲ್ಲಳು. ಅತ್ಯಾಚಾರ ಎನ್ನುವುದಕ್ಕೆ ಸಾಮಾನ್ಯ ಅರ್ಥ ವೈವಾಹಿಕ ಸಂಬಂಧದ ಹೊರತಾಗಿ ಅವರ ಅನುಮತಿ ಅಥವಾ ಇಚ್ಛೆ ಇಲ್ಲದೇ ನಡೆಸುವ ಸಂಭೋಗ ಎನ್ನುವುದು. ಆದರೆ ಮಹಿಳೆಯೊಬ್ಬಳು ಆಕೆಯ ಸಹಮತ ಇಲ್ಲದೇ ಪತಿ ನಡೆಸುವ ಸಂಭೋಗದಿಂದಲೂ ಗರ್ಭಿಣಿಯಾಗಬಹುದು. ತನ್ನ ಆಪ್ತ ಸಂಗಾತಿಯಿಂದ ಕೂಡಾ ಇಂಥ ದೌರ್ಜನ್ಯ ನಡೆಯಬಹುದು ಎನ್ನುವುದನ್ನು ಗುರುತಿಸದೇ ಇರುವುದಕ್ಕೆ ಪಶ್ಚಾತ್ತಾಪವಿದೆ. ಅದು ಕೂಡಾ ಅತ್ಯಾಚಾರವಾಗಬಲ್ಲದು" ಎಂದು ತೀರ್ಪು ಬರೆದಿರುವ ನ್ಯಾಯಮೂರ್ತಿ ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News