​ಉಡುಪಿ ನಗರಸಭೆಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಚರ್ಚೆ!

Update: 2022-09-30 14:11 GMT

ಉಡುಪಿ, ಸೆ.30: ಮಲ್ಪೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ವಿರುದ್ಧದ ಶೇ.40 ಕಮಿಷನ್ ಆರೋಪದ ಬಗ್ಗೆ ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರುಗಳ ಮಧ್ಯೆ ತೀವ್ರ ಚರ್ಚೆ ನಡೆಯಿತು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್ ಅಂಚನ್, ವಿಪಕ್ಷ ನಾಯಕ ರಮೇಶ್ ಕಾಂಚನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಘುಪತಿ ಭಟ್ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಲಾಗಿದೆ. ಇದು ಸತ್ಯ ವಿಚಾರವಲ್ಲ. ನಮ್ಮಲ್ಲಿ ಯಾರು ಕಮಿಷನ್ ಪಡೆದುಕೊಳುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕಾಂಚನ್, ಪ್ರತಿಭಟನೆ ನಡೆಸುವುದು ಪ್ರತಿಪಕ್ಷದಲ್ಲಿರುವ ನಮ್ಮ ಹಕ್ಕು. ಇಂತಹ ಸಂದರ್ಭದಲ್ಲಿ ರಾಜಕೀಯ ಆರೋಪ ಮಾಡುವುದು ಸಾಮಾನ್ಯ ಎಂದು ತಿಳಿಸಿದರು. ರಘುಪತಿ ಭಟ್ ಮಾತನಾಡಿ, ನಮ್ಮ ಮೇಲೆ ಆರೋಪ ಮಾಡಿದರೆ ಅವರ ಯೋಗ್ಯತೆ ಅಳೆಯುತ್ತದೆ. ಜಿಲ್ಲೆ ಯಲ್ಲಿ ಯಾವುದೇ ಪಕ್ಷದ ಜನಪ್ರತಿನಿಧಿಗಳು ಕೂಡ ಶೇ.40 ಕಮಿಷನ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

'ಗುಂಡಿ ಮುಕ್ತ ನಗರದ ರಸ್ತೆ'
ನಗರದಲ್ಲಿ ಹದಗೆಟ್ಟ ರಸ್ತೆಗಳ ಕುರಿತ ರಮೇಶ್ ಕಾಂಚನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ನಗರದ ಯಾವುದೇ ರಸ್ತೆ ಕಾಮಗಾರಿ ಗಳು ಕೂಡ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿಲ್ಲ. ನವೆಂಬರ್‌ನಲ್ಲಿ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ರಸ್ತೆಯ ಗುಂಡಿ ಮುಕ್ತ ನಗರ ಮಾಡಲಾಗುವುದು ಎಂದು ತಿಳಿಸಿದರು.

ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ರಿಡಿ ಹಂತದಲ್ಲಿದ್ದು, ಎರಡು ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಅಂಬಾಗಿಲು ಗುಂಡಿಬೈಲು ರಸ್ತೆ ಅಭಿವೃದ್ಧಿಗೆ 2ಕೋಟಿ ರೂ. ಹಣ ಮಂಜೂರಾಗಿದ್ದು, ಹೆಚ್ಚಿನ ಹಣ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಮಳೆಯಿಂದಾಗಿ ಅಕ್ಟೋಬರ್ ವರೆಗೆ ನಗರದ ರಸ್ತೆ ಕಾಮಗಾರಿ ನಡೆಸಲು ಆಗುತ್ತಿಲ್ಲ. ಹೊಂಡ ಮುಚ್ಚುವ ಕಾರ್ಯ ನಡೆಸಿದರೆ ಮಳೆಯಿಂದ ಕಿತ್ತು ಹೋಗುವ ಸಾಧ್ಯತೆ ಇದೆ ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಕಚೇರಿ ಹಾಗೂ ನಗರಸಭೆ ಯಲ್ಲಿ ಅಧಿಕಾರಿಗಳೇ ಇಲ್ಲ. ತಾಲೂಕು ಕಚೇರಿಯಲ್ಲಿ ಪೂರ್ಣಪ್ರಮಾಣದ ತಹಶೀಲ್ದಾರ್ ಅವರೇ ಇಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ರಮೇಶ್ ಕಾಂಚನ್ ದೂರಿದರು.

'ಬಸ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ'
ಅಂಬಾಗಿಲು, ಗುಂಡಿಬೈಲು ಕಲ್ಸಂಕ ಮಾರ್ಗದಲ್ಲಿ ಬಸ್‌ಗಳೇ ಬರುತ್ತಿಲ್ಲ. ಪರ್ಮಿಟ್ ಇದ್ದರೂ ಬಾರದ ಬಸ್‌ಗಳ ವಿರುದ್ಧ ಆರ್‌ಟಿಓ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂತಹ ಬಸ್‌ಗಳ ಪರ್ಮಿಟ್ ರದ್ದುಗೊಳಿಸಬೇಕು ಎಂದು ಸದಸ್ಯ ಪ್ರಭಾಕರ ಪೂಜಾರಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ, ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳ ಲಾಗುವುದು ಎಂದರು. ನರ್ಮ್ ಬಸ್ ಹಾಗೂ ಖಾಸಗಿ ಬಸ್‌ಗಳು ಒಂದೇ ಮಾರ್ಗದಲ್ಲಿ ಪೈಪೋಟಿ ಮಾಡುವ ಬದಲು ಬಸ್ ಇಲ್ಲದ ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಸೂಚಿಸಿದರು.

ಮೇಲಂತಸ್ತು ನಿರ್ಮಾಣಕ್ಕೆ ಅನುಮತಿ: ನಿರ್ಣಯ
ನಗರದಲ್ಲಿರುವ ಐದು ವರ್ಷಗಳ ಹಳೆಯ ಕಟ್ಟಡಗಳಿಗೆ ಮೇಲಂತಸ್ತು ನಿರ್ಮಿಸಲು ಏಕ ನಿವೇಶನ ಇಲ್ಲದಿದ್ದರೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಿಂದ ಲೈಸನ್ಸ್ ನೀಡಬೇಕು ಎಂಬ ನಿರ್ಣಯವನ್ನು ನಗರಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಠಿಣ ಕಾನೂನು ಮತ್ತು ನಿಯಮಾವಳಿ ಗಳಿಂದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮೊದಲ ಮಹಡಿ ನಿರ್ಮಿಸಲು ಕೆಳಗಿನ ಮನೆಯ ಖಾತೆಯನ್ನು ಹೊಂದಿ, ಈ ಹಿಂದೆ ಕನ್‌ವರ್ಶನ್ ಆಗದೇ ಸಿಂಗಲ್‌ಲೇಔಟ್ ಆಗಿಲ್ಲದಿದ್ದರೂ ಮೊದಲ ಮಹಡಿ ನಿರ್ಮಿಸಲು ಪೌರಯುಕ್ತರ ವರದಿಯೊಂದಿಗೆ ಪ್ರಾಧಿಕಾರವು ಅನುಮತಿ ನೀಡುವಂತೆ ಶಾಸಕ ಭಟ್ ಅವರ ಸೂಚನೆಯಂತೆ ನಿರ್ಣಯವನ್ನು ಮಂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News