ತನ್ನ ಹೆಸರು ಬದಲಾವಣೆ ಚರ್ಚೆ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

Update: 2022-09-30 15:01 GMT

ಉಡುಪಿ(Udupi): ಗಂಗೊಳ್ಳಿಯಲ್ಲಿ ಮೀನುಗಾರಿಕಾ ಜಟ್ಟಿ ಕುಸಿಯಲು ಕಳಪೆ ಕಾಮಗಾರಿ ಕಾರಣವಾಗಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಜಟ್ಟಿ ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ನಿರ್ಮಾಣ ಸಂಸ್ಥೆ ಮುಂದೆ ಯಾವುದೇ ಕೆಲಸ ಮಾಡಲು ಅವಕಾಶ ಕೊಡಬಾರದು. ಈ ಕಾಮಗಾರಿಯ ಬಗ್ಗೆ ತನಿಖೆ ಮಾಡಿ, ಠೇವಣಿ ಇಟ್ಟಿದ್ದರೆ ಮುಟ್ಟುಗೋಲು ಹಾಕಬೇಕು. ಮೊಟಕುಗೊಂಡ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಪಿಎಫ್‌ಐ ದೇಶ ದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಎಸ್‌ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು ಅದರ ಮೇಲೆ ಕ್ರಮ ಕೈಗೊಳ್ಳಬೇಕಾಗಿರುವುದು ಚುನಾವಣಾ ಆಯೋಗ. ಎಸ್‌ಡಿಪಿಐನಲ್ಲಿರುವ ಪಿಎಫ್‌ಐ ಕಾರ್ಯಕರ್ತರ ಬಗ್ಗೆ ತನಿಖೆಯಾಗುತ್ತಿದೆ. ಆಸ್ತಿ ಮುಟ್ಟುಗೋಲುಗೆ ಗೃಹ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.

ಶೋಭಾ ಕರಂದ್ಲಾಜೆ ಹೆಸರು ಬದಲಿಸಿ ಶೋಭಾ ಗೌಡ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳನ್ನ ಕೆಲವರು ಜೋಕರ್ ಅಂದುಕೊಂಡಿದ್ದಾರೆ. ಮಾಧ್ಯಮ, ಸಾಮಾಜಿಕ,ರಾಜಕೀಯ ವಲಯ ಅಥವಾ ವಿರೋಧ ಪಕ್ಷ ಅಪಪ್ರಚಾರ ನಿಲ್ಲಿಸಬೇಕು. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ?"ಎಂದು ಪ್ರಶ್ನಿಸಿದರು.

ಆರೆಸ್ಸೆಸ್ ನಿಷೇಧ ಬೇಡಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಅದು ದೋಣಿಗೆ ನಾವಿಕನಿಲ್ಲದ ಪಕ್ಷ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದೆ. ಆರೆಸ್ಸೆಸ್ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಹಾಗೂ ಅರ್ಹತೆ ಕಾಂಗ್ರೆಸ್‌ಗೆ ಇಲ್ಲ. ಆರೆಸ್ಸೆಸ್ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ? ಒಂದು ಬಾರಿ ಆರೆಸ್ಸೆಸ್ ಶಾಖೆಗೆ ಭೇಟಿ ಕೊಡಿ. ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ ಎಂದು ತಿಳಿಸಿದರು.

ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದಾರೆಯೋ ಅಲ್ಲಿ ಹೋಗಿ ಭಾರತ್ ಜೋಡೋ ಮಾಡಲಿ. ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಹಾಗಾಗಿ ಅಲ್ಲಿ ಭಾರತ ಜೋಡೋ ಮಾಡಲಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡು ಮಾಡುವ ಅಗತ್ಯವಿಲ್ಲ. ಪಾಕಿಸ್ತಾನ, ಚೀನಾ, ಬಾಂಗ್ಲಾ ಗಡಿಯಲ್ಲಿ ಯಾತ್ರೆ ಮಾಡಲಿ. ಇವರು ಮಾಡುತ್ತಿರುವುದು ಭಾರತ್ ಜೋಡೋವೇ ಅಥವಾ ಭಾರತ್ ತೋಡೋವೇ ಎಂಬುದು ಸ್ಪಷ್ಟಪಡಿಸಲಿ ಎಂದು ಶೋಭಾ ಟೀಕಿಸಿದರು.

ಶೋಭಾ ಕರಂದ್ಲಾಜೆ ಜೊತೆ ಫೋಟೋ ತೆಗೆದವರಿಗೆ 5000 ಬಹುಮಾನ ಬಹುಮಾನ ಘೋಷಿಸಿದ್ದ ಕಾಂಗ್ರೆಸ್ ನಾಯಕ ಮಿಥುನ್ ರೈ ಗೆ ತಿರುಗೇಟು ನೀಡಿದ ಶೋಭಾ, ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ​ಉಡುಪಿ ನಗರಸಭೆಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಚರ್ಚೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News