ಭಾರತದ ಪೆಟ್ರೊಕೆಮಿಕಲ್ ಸಂಸ್ಥೆಗೆ ಅಮೆರಿಕದ ನಿರ್ಬಂಧ

Update: 2022-09-30 17:57 GMT

ವಾಷಿಂಗ್ಟನ್, ಸೆ.30: ಇರಾನ್ನ ತೈಲ ಉತ್ಪನ್ನಗಳನ್ನು ರಹಸ್ಯವಾಗಿ ಮಾರಾಟ ಮಾಡುತ್ತಿದ್ದ ಹಲವು ಸಂಸ್ಥೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು ಇದರಲ್ಲಿ ಮುಂಬೈ ಮೂಲದ ಪೆಟ್ರೊಕೆಮಿಕಲ್ ಸಂಸ್ಥೆಯೂ ಸೇರಿದೆ ಎಂದು ಅಮೆರಿಕದ ವಿತ್ತ ಇಲಾಖೆ ಘೋಷಿಸಿದೆ. 

ಇರಾನ್ನಿಂದ ರಹಸ್ಯವಾಗಿ ತೈಲ ಖರೀದಿಸಿ ಅದನ್ನು ಚೀನಾಕ್ಕೆ ರವಾನಿಸುತ್ತಿರುವ ಆರೋಪದಲ್ಲಿ  ಮುಂಬೈ ಮೂಲದ ತಿಬಲಾಜಿ ಪೆಟ್ರೋಕೆಮಿಕಲ್ಸ್ ಸಂಸ್ಥೆಯ ವಿರುದ್ಧ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕ ಹೇಳಿದೆ. 2018-19ರಲ್ಲಿ ಇರಾನ್ ವಿರುದ್ಧ ಅಮೆರಿಕ ಏಕಪಕ್ಷೀಯ ನಿರ್ಬಂಧ ಜಾರಿಗೊಳಿಸಿದ ಬಳಿಕ ಭಾರತದ ಸಂಸ್ಥೆಯೊಂದರ ವಿರುದ್ಧ ಕೈಗೊಂಡಿರುವ ಪ್ರಪ್ರಥಮ ಕ್ರಮ ಇದಾಗಿದೆ. ಅಮೆರಿಕದ ಏಕಪಕ್ಷೀಯ ನಿರ್ಬಂಧಗಳನ್ನು ಅನುಮೋದಿಸಲು ಭಾರತ ಅಧಿಕೃತವಾಗಿ ನಿರಾಕರಿಸಿದ್ದರೂ, ಇರಾನ್ನಿಂದ ತೈಲ ಆಮದನ್ನು ನಿಲ್ಲಿಸಲು ಮೋದಿ ಸರಕಾರ 2019ರಲ್ಲಿ ಒಪ್ಪಿಕೊಂಡಿದೆ. 

ದಕ್ಷಿಣ ಏಶ್ಯಾ ಮತ್ತು ಪೂರ್ವ ಏಶ್ಯಾಕ್ಕೆ ನೂರಾರು ಮಿಲಿಯನ್ ಡಾಲರ್ಗಳಷ್ಟು ಮೊತ್ತದ ಇರಾನ್ನ ಪೆಟ್ರೊಕೆಮಿಕಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಅಂತರಾಷ್ಟ್ರೀಯ ಸಂಸ್ಥೆಗಳ ನೆಟ್ವರ್ಕ್ ವಿರುದ್ಧ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ವಿತ್ತ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ವಿಭಾಗದ ಹೇಳಿಕೆ ತಿಳಿಸಿದೆ.

ಇಂದಿನ ನಿರ್ಬಂಧವು ಇರಾನ್ನ ದಲ್ಲಾಳಿಗಳು ಹಾಗೂ ಹಣಕಾಸು ವರ್ಗಾವಣೆ ಮತ್ತು ಇರಾನ್ನ ಪೆಟ್ರೊಕೆಮಿಕಲ್ ಉತ್ಪನ್ನ ಹಾಗೂ ಪೆಟ್ರೋಲಿಯಂ ಸಾಗಣೆಯನ್ನು ಸುಗಮಗೊಳಿಸಿದ ಯುಎಇ, ಹಾಂಕಾಂಗ್ ಮತ್ತು ಭಾರತದಲ್ಲಿನ ಹಲವಾರು ಮುಂಚೂಣಿ ಸಂಸ್ಥೆಗಳನ್ನು ಗುರಿಯಾಗಿಸಿದೆ. ಭಾರತೀಯ ಮೂಲದ ತಿಬಲಾಜಿ ಪೆಟ್ರೋಲಿಯಂ ಪ್ರೈ. ಲಿ.ಸಂಸ್ಥೆಯು ಮಿಲಿಯಾಂತರ ಡಾಲರ್ ಮೊತ್ತದ ಪೆಟ್ರೊಕೆಮಿಕಲ್ಸ್ ಉತ್ಪನ್ನಗಳನ್ನು ಚೀನಾಕ್ಕೆ 
ರವಾನಿಸಿದೆ. ಈ ಸಂಸ್ಥೆ ಅಮೆರಿಕದಲ್ಲಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅಮೆರಿಕ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News