ಉಡುಪಿ ಧರ್ಮಪ್ರಾಂತದ ಕುಲಪತಿಗಳಾಗಿ ವಂ.ಡಾ.ರೋಶನ್ ಡಿ’ಸೋಜ
ಉಡುಪಿ, ಅ.1: ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ವಂ. ಡಾ. ರೋಶನ್ ಡಿಸೋಜಾರನ್ನು ಉಡುಪಿ ಧರ್ಮಪ್ರಾಂತದ ನೂತನ ಕುಲಪತಿಗಳಾಗಿ ನೇಮಕ ಮಾಡಿದ್ದಾರೆ.
ಧರ್ಮಾಧ್ಯಕ್ಷರ ನಿವಾಸದಲ್ಲಿ ಇಂದು ನಡೆದ ಸರಳ ಪ್ರಾರ್ಥನಾ ವಿಧಿಯ ವೇಳೆ ಧರ್ಮಾಧ್ಯಕ್ಷರು ನೂತನ ಕುಲಪತಿ ವಂ. ರೋಶನ್ ಡಿಸೋಜಾರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಂತರ ಬಿಷಪ್‌ರು ನೂತನ ಕುಲಪತಿಗಳಿಗೆ ಕುಲಪತಿ ಪೀಠದ ದಾಖಲೆಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಉಡುಪಿ ಧರ್ಮಪ್ರಾಂತದ ವಿವಿಧ ಆಯೋಗಗಳ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಂ. ಡಾ.ರೋಶನ್ ಡಿಸೋಜಾ 2010ರ ಎಪ್ರಿಲ್ ತಿಂಗಳಲ್ಲಿ ಗುರುದೀಕ್ಷೆ ಯನ್ನು ಸ್ವೀಕರಿಸಿದ್ದು, ರೊಜಾರಿಯೊ ಕ್ಯಾಥಿಡ್ರಲ್, ಕುಲಶೇಖರ ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸಂತ ಪೀಟರ್ಸ್ ಪೋಂತಿಫಿಕಾಲ್ ಸಂಸ್ಥೆಯಲ್ಲಿ ಕ್ಯಾನನ್ ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ರೋಮ್‌ನ ಉರ್ಬಾನಿಯಾನ ಫೋಂತಿಫಿಕಾಲ್ ವಿಶ್ವವಿದ್ಯಾನಿಲಯದಲ್ಲಿ ಕ್ಯಾನನ್ ಲಾ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ. ರೋಮನ್ ರೋಟಾ ಟ್ರಿಬ್ಯುನಲ್‌ನಲ್ಲಿ ನ್ಯಾಯಶಾಸ್ತ್ರದ ಡಿಪ್ಲೋಮಾವನ್ನು ಸಹ ಇವರು ಪಡೆದಿದ್ದಾರೆ.